ಬೆಂಗಳೂರು: ಪ್ರವಾಸಕ್ಕೆ ಹೋಗಿದ್ದಾಗ ಪರಿಚಯವಾದವಳು ಮನೆಗೆ ಬಂದು ಹೊಂಚು ಹಾಕಿ ಹಣ, ಒಡವೆಗಳನ್ನ ದೋಚಿ ಪರಾರಿಯಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಕುಮಾರಸ್ವಾಮಿ ಲೇಔಟ್ ನಿವಾಸಿಯಾಗಿರುವ ಗೌರಮ್ಮ ಎಂಬಾಕೆ ಎರಡು ವರ್ಷಗಳ ಹಿಂದೆ ಕನ್ಯಾಕುಮಾರಿ ಪ್ರವಾಸಕ್ಕೆ ತೆರಳಿದ್ದಾಗ ಶಶಿಕಲಾ ಎಂಬಾಕೆ ಜೊತೆ ಸ್ನೇಹವಾಗಿತ್ತು. ಆಗಾಗ ಮನೆಗೆ ಬಂದು ಹೋಗುತ್ತಿದ್ದ ಶಶಿಕಲಾ, ಇತ್ತೀಚಿಗೆ ಗೌರಮ್ಮ ಒಬ್ಬಳೇ ಮನೆಯಲ್ಲಿದ್ದಾಗ ಬಂದಿದ್ದಾಳೆ , ತದನಂತರ ತನಗೆ ಪರಿಚಿತರೊಬ್ಬರು ಹಣ ನೀಡಬೇಕು ಹೋಗಿ ಭೇಟಿ ಮಾಡಿ ಹಣ ಪಡೆದು ಬರೋಣ ಎಂದಿದ್ದಾಳೆ, ಸರಿ ಎಂದು ಸಿದ್ಧವಾಗುವಷ್ಟರಲ್ಲಿ ಅಡುಗೆ ಮನೆಗೆ ಹೋಗಿ ತಾನೇ ಟೀ ಮಾಡಿ ಅದರಲ್ಲಿ ಅಮಲು ಪದಾರ್ಥ ಹಾಕಿ ಮನೆ ಮಾಲೀಕಿಯಾದ ಗೌರಮ್ಮಳ ಪ್ರಜ್ಞೆ ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾಳೆ.
ಬಳಿಕ ಆಕೆಯ ಮೈಮೇಲಿದ್ದ ಮಾಂಗಲ್ಯ, ಚಿನ್ನದ ಬಳೆ,ಉಂಗುರ, ಹಾಗೂ ಮನೆಯಲ್ಲಿದ್ದ 30 ಸಾವಿರ ರೂ.ಹಣ ಕದ್ದು ಪರಾರಿಯಾಗಿದ್ದಾಳೆ. ಇಡೀ ದಿನ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಗೌರಮ್ಮ ಎಚ್ಚರಗೊಂಡ ಬಳಿಕ ಅಸಲಿ ವಿಷಯ ತಿಳಿದು ಕುಮಾರಸ್ವಾಮಿ ಲೇಔಟ್ ಠಾಣಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.