ಬೆಂಗಳೂರು: ರಾಜ್ಯಾದ್ಯಂತ ಕಾವೇರಿ ಹೋರಾಟ ಕಾವು ಪಡೆದುಕೊಂಡಿದೆ. ಇಂದು ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ರಾಜ್ಯಾದ್ಯಂತ ಬಂದ್ ಘೋಷಿಸಲಾಗಿದೆ. ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಕರ್ನಾಟಕ ಬಂದ್ ಪ್ರಯುಕ್ತ ಹಲವು ಕನ್ನಡ ಪರ, ದಲಿತ ಪರ ಹಾಗೂ ರೈತ ಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ವೇಳೆ ತಮಿಳುನಾಡು ವಿರೋಧಿ ಭಿತ್ತಿ ಪತ್ರಗಳನ್ನು ಪ್ರದರ್ಶನ ಮಾಡಲಾಯಿತು. ಮತ್ತೊಂದೆಡೆ ಮಂಡ್ಯದಿಂದ ರೈತರಿಗೋಸ್ಕರ ಫ್ರೀಡಂ ಪಾರ್ಕ್ಗೆ ಬಂದ ಶ್ವಾನ ರಾಂಬೋ ಎಲ್ಲರ ಗಮನ ಸೆಳೆಯಿತು.
ಬೆಂಗಳೂರಿಗೆ ಪಾದಯಾತ್ರೆ ಮೂಲಕ ಬಂದ ರಾಂಬೊ ಚಲನಚಿತ್ರ ವಾಣಿಜ್ಯ ಮಂಡಳಿ ಕೂಡ ಸಂಪೂರ್ಣ ಬೆಂಬಲ ನೀಡುವಂತೆ ಕೋರಿಕೆ ಇಟ್ಟಿತ್ತು. ಕರ್ನಾಟಕ ಬಂದ್ಗೆ ರೈತ ಬಾಂಧವರಿಗಾಗಿ ಸಂಘ ಸಂಸ್ಥೆಗಳ ಬೆಂಬಲ ಕೋರಿತು. ಬಾಯಲ್ಲಿ ಪ್ರತಿಕೃತಿ ಹಿಡಿದು ಶ್ವಾನ ಸಾಗಿತು. ಶ್ವಾನವು ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ಸಮಸ್ತ ಕನ್ನಡಿಗರ ಪರವಾಗಿ ಸಲ್ಲಿಸಲಿದೆ. ಅದನ್ನು ಆಶೀರ್ವದಿಸಿ ಹೊರಾಟಗಾರರು ಕಳುಹಿಸಿಕೊಟ್ಟರು.
ಮಿನರಲ್ ವಾಟರ್ ಸ್ನಾನ: ಪ್ರತಿಭಟನಾಕಾರರೊಬ್ಬರು ಫ್ರೀಡಂ ಪಾರ್ಕ್ ಮುಂದೆ ಮಿನರಲ್ ವಾಟರ್ನಿಂದಲೇ ಸ್ನಾನ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಕಾವೇರಿ ನೀರಿಲ್ಲ ಹಾಗಾಗಿ ಮಿನರಲ್ ವಾಟರ್ ಬಳಕೆ ಮಾಡಿ ಸ್ನಾನ ಮಾಡುವ ಪರಿಸ್ಥಿತಿ ಬಂದಿದೆ ಎಂದು ಸಿಟ್ಟು ತೋರಿಸಿದ ಪ್ರತಿಭಟನಾಕಾರರು ವಿನೂತನವಾಗಿ ಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದರು.
ಮತ್ತೊಂದೆಡೆ ಕರ್ನಾಟಕ ಬಂದ್ ಹಿನ್ನೆಲೆ ಬೆ.ಮ.ಸಾ ಸಂಸ್ಥೆಯ 5602 ಬಸ್ಗಳ ಪೈಕಿ 3587 ಬಸ್ಗಳು ನಗರದಲ್ಲಿ ಕಾರ್ಯಾಚರಣೆ ನಡೆಸುತ್ತಿವೆ. ಬಂದ್ ಕಾರಣ ಸಾರ್ವಜನಿಕ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ. ಬೇಡಿಕೆಗೆ ಅನುಗುಣವಾಗಿ ಬಸ್ಗಳು ಕಾರ್ಯಾಚರಣೆ ನಡೆಸುತ್ತಿವೆ ಎಂದು ಬಿಎಂಟಿಸಿ ತಿಳಿಸಿದೆ.
ಆಪ್ ಕಾರ್ಯಕರ್ತರ ಪ್ರತಿಭಟನೆ: ಕಾವೇರಿ ವಿಚಾರವಾಗಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಪಕ್ಷದ ರಾಜ್ಯ ಕಚೇರಿಯ ಮುಂದೆ ಕಾರ್ಯಕರ್ತರು ಜಮಾವಣೆಯಾಗಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಹಾಗೂ ತಮಿಳುನಾಡು ಮುಖ್ಯಮಂತ್ರಿಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಕರ್ನಾಟಕ ಬಂದ್: ಬುರ್ಖಾ ಧರಿಸಿ, ಖಾಲಿ ಬಿಂದಿಗೆ ಹೊತ್ತು ಪ್ರತಿಭಟನೆಗೆ ಬಂದ ವಾಟಾಳ್ ನಾಗರಾಜ್...