ಬೆಂಗಳೂರು: ಮಹಾಮಾರಿ ಕೊರೊನಾದ ವಿರುದ್ಧ ಹೋರಾಡಿ ಗೆದ್ದು ಬಂದ ಹತ್ತು ವರ್ಷದ ಬಾಲಕ ತನ್ನ ಅನುಭವವನ್ನು ಹಂಚಿಕೊಂಡಿದ್ದು, ಈತನ ಧೈರ್ಯ ಇತರರಿಗೂ ಮಾದರಿಯಾಗಿದೆ.
ಸಂಜಯನಗರದಲ್ಲಿ ವಾಸವಿರುವ ಹತ್ತು ವರ್ಷದ ಚಂದನ್ ಎಂಬ ಬಾಲಕನಿಗೆ ಕೊರೊನಾ ಸೋಂಕು ತಗುಲಿತ್ತು. ಇದೀಗ ಈತ ಮಹಾಮಾರಿಯಿಂದ ಗುಣಮುಖನಾಗಿದ್ದು, ಕೊರೊನಾ ಪೀಡಿತ ಇತರ ಮಕ್ಕಳಿಗೆ ಮಾದರಿಯಾಗಿದ್ದಾನೆ. ಅಪ್ಪ - ಅಮ್ಮನಿಂದ ಈತನಿಗೆ ಸೋಂಕು ತಗುಲಿತ್ತು. ಬಾಲಕನ ತಂದೆ - ತಾಯಿಗಳು ಮೊದಲು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ಬಳಿಕ ಬಾಲಕ ಒಬ್ಬಂಟಿಯಾಗಿ ಕೊರೊನಾ ಎದುರಿಸಿದ್ದನು.
ಇನ್ನು ಕೊರೊನಾ ಚಿಕಿತ್ಸೆ ಪಡೆಯುತ್ತಿದ್ದ ಈ ಬಾಲಕ ಕುಗ್ಗದೇ, ಕೊರಗದೆ ತನ್ನ ವಾರ್ಡ್ನಲ್ಲಿ ಡ್ರಾಯಿಂಗ್, ಪೇಟಿಂಗ್, ಟಿಕ್ಟಾಕ್ ಮಾಡುವ ಮೂಲಕ ಮನೋಸ್ಥೈರ್ಯವನ್ನು ಹೆಚ್ಚಿಸಿಕೊಳ್ಳುತ್ತಿದ್ದನಂತೆ. ಈತ 21 ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಅಲ್ಲಿದ್ದ ವೈದ್ಯರು, ನರ್ಸ್ಗಳಿಗೆ ಅಚ್ಚುಮೆಚ್ಚಿನ ಬಾಲಕನಾಗಿದ್ದನು.
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚಂದನ್, ಸದ್ಯ ಡಿಸ್ಜಾರ್ಜ್ ಆಗಿ ಸಂಪೂರ್ಣವಾಗಿ ಗುಣಮುಖನಾಗಿದ್ದಾನೆ. ಚಂದನ್ 5ನೇ ತರಗತಿ ಓದುತ್ತಿದ್ದು, ಜನರಿಗೆ ಜಾಗೃತಿ ಮೂಡಿಸುತ್ತಿದ್ದಾನೆ. ಕೊರೊನಾದಿಂದ ಆದಷ್ಟು ಜಾಗೃತರಾಗಿರಿ, ಮಾಸ್ಕ್ ಧರಿಸಿ, ಸ್ವಚ್ಚತೆ ಕಾಪಾಡಿ ಎಂದು ಜನರಲ್ಲಿ ಮನವಿ ಮಾಡಿಕೊಂಡಿದ್ದಾನೆ.