ಬೆಂಗಳೂರು: ನಗರದಲ್ಲಿ ಗುರುವಾರ ಸುರಿದ ಮಳೆಗೆ ಪೊಲೀಸ್ ತಿಮ್ಮಯ್ಯ ವೃತ್ತದ ಸಮೀಪದಲ್ಲಿನ ಬೃಹತ್ ಮರ ಧರಾಶಾಯಿಯಾಗಿದೆ. ಅದೃಷ್ಟವಶಾತ್ ಮರದ ಕೆಳಗೆ ನಿಂತಿದ್ದ ಜನರಿಗೆ ಯಾವುದೇ ತೊಂದರೆಯಾಗಿಲ್ಲ. ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಎರಡು ಬೈಕ್‌ಗಳಿಗೆ ಹಾನಿಯಾಗಿದೆ. ಟೆಲಿಫೋನ್ ಹಾಗೂ ಇನ್ನಿತರ ಕೇಬಲ್‌ಗಳು ತುಂಡಾಗಿವೆ.
ಘಟನೆಯ ವಿಷಯ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ಸಂಚಾರಿ ಪೊಲೀಸರು ಗಾಯಾಳುಗಳನ್ನು ತಮ್ಮ ವಾಹನದಲ್ಲಿ ಆಸ್ಪತ್ರೆಗೆ ತಲುಪಿಸಿದರು. ಬಳಿಕ ಆಗಮಿಸಿದ ಪಾಲಿಕೆಯ ಅರಣ್ಯ ಸಿಬ್ಬಂದಿ ರಸ್ತೆಯಲ್ಲಿದ್ದ ಮರ ತೆರವುಗೊಳಿಸಿದರು. ಹಳೆಯ ಮರದ ಬೇರುಗಳು ಬಲವಾಗಿಲ್ಲದ ಕಾರಣ ನೆಲಕ್ಕುರುಳಿದೆ ಎಂದು ಅರಣ್ಯ ಸಿಬ್ಬಂದಿ ತಿಳಿಸಿದ್ದಾರೆ.
ಘಟನೆಯಿಂದ ಪೊಲೀಸ್ ತಿಮ್ಮಯ್ಯ ವೃತ್ತ ಬಳಿ ಸಂಚಾರ ದಟ್ಟಣೆ ಉಂಟಾಗಿತ್ತು. ವಾಹನಗಳು ಅರ್ಧ ಗಂಟೆಗೂ ಹೆಚ್ಚು ಕಾಲ ಸಾಲುಗಟ್ಟಿ ನಿಂತಿದ್ದವು. ವಿಧಾನಸೌಧ, ರಾಜಭವನ, ಮೈಸೂರು ಬ್ಯಾಂಕ್ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಮರ ತೆರವುಗೊಳಿಸುವವರೆಗೂ ಸಂಚಾರ ದಟ್ಟಣೆ ಕಂಡುಬಂದಿತು.
ಎಲ್ಲೆಲ್ಲಿ ಮಳೆ?
ನಗರದ ಬಹುತೇಕ ಭಾಗಗಳಲ್ಲಿ ಸಾಧಾರಣ ಹಾಗೂ ಕೆಲವೆಡೆ ಮಾತ್ರ ಜೋರು ಮಳೆಯಾಗಿದೆ. ಉಳಿದಂತೆ, ಸಂಜೆಯ ಬಳಿಕ ಬಹುತೇಕ ಎಲ್ಲ ಸ್ಥಳಗಳಲ್ಲಿ ಮೋಡ ಕವಿದ ವಾತಾವರಣ ಗೋಚರಿಸಿತು. ಮಹದೇವಪುರ, ಬೊಮ್ಮನಹಳ್ಳಿ, ದಾಸರಹಳ್ಳಿ, ಆರ್.ಆರ್.ನಗರ ಹಾಗೂ ಪೂರ್ವ ವಲಯದ ಹಲವೆಡೆ ವ್ಯಾಪಕ ಮಳೆಯಾಗಿದೆ.
ಶಿವಾನಂದ ವೃತ್ತ, ಎಚ್ಎಂಟಿ ವಾರ್ಡ್, ಪೀಣ್ಯ, ದೊಡ್ಡ ಬಿದರಕಲ್ಲು, ಕೊಟ್ಟಿಗೆಪಾಳ್ಯ, ಕೆಂಗೇರಿ, ಬಿಇಎಂಎಲ್ ಲೇಔಟ್, ರಾಜಾಜಿನಗರ, ಮಂಜುನಾಥ ನಗರ, ಪ್ಯಾಲೆಸ್ ಗುಟ್ಟಹಳ್ಳಿ, ಗಾಳಿ ಆಂಜನೇಯ ದೇಗುಲ, ವಿದ್ಯಾಪೀಠ, ಮನೋರಯನಪಾಳ್ಯ, ಸಂಪಂಗಿರಾಮನಗರ, ಕೋರಮಂಗಲ, ಸಾರಕ್ಕಿ, ಬೇಗೂರು, ಸಿಂಗಸಂದ್ರ, ಬೆಳ್ಳಂದೂರು, ಹೊಯ್ಸಳನಗರ, ಬೆನ್ನಿಗಾನಹಳ್ಳಿ, ಹೂಡಿ ಸೇರಿದಂತೆ ಹಲವೆಡೆ ಸಾಧಾರಣ ಮಳೆಯಾಗಿದೆ. ಉಳಿದಂತೆ, ಪುಟ್ಟೇನಹಳ್ಳಿ, ಅತ್ತೂರು, ಯಲಹಂಕ, ವಿದ್ಯಾರಣ್ಯಪುರ, ಜಕ್ಕೂರು, ಚೊಕ್ಕಸಂದ್ರ, ಕುಶಾಲ್ನಗರ, ನಾಗರಬಾವಿ, ಬಾಣಸವಾಡಿ, ವರ್ತೂರು, ರೇಸ್ ಕೋರ್ಸ್ ರಸ್ತೆ, ಅಂಜನಪುರ ಸೇರಿದಂತೆ ಬಹುತೇಕ ಭಾಗಗಳಲ್ಲಿ ತುಂತುರು ಮಳೆಯಾಗಿದೆ.
ಮುಂದಿನ ಎರಡು ದಿನ ಮಳೆ ಸಾಧ್ಯತೆ
ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರಲಿದೆ. ಮುಂದಿನ ಎರಡು ದಿನಗಳ ಕಾಲ ಹಗುರದಿಂದ ಸಾಧಾರಣ ಮಳೆಯಾಗುವ ಹೆಚ್ಚಿನ ಸಾಧ್ಯತೆಯಿದೆ. ಗರಿಷ್ಠ ತಾಪಮಾನ 28 ಮತ್ತು ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.