ಬೆಂಗಳೂರು: ರಾಜಧಾನಿಯಲ್ಲಿ ವಾಹನ ಸವಾರರ ಸಂಖ್ಯೆ ಹೆಚ್ಚಾದಂತೆ ಸಂಚಾರಿ ನಿಯಮಗಳ ಉಲ್ಲಂಘನೆ ಪ್ರಕರಣಗಳು ಸಹ ಏರಿಕೆಯಾಗುತ್ತಿವೆ. ಪ್ರಕರಣ ದಾಖಲಿಸಿದರೂ ಸವಾರರು ಮಾತ್ರ ದಂಡ ಪಾವತಿಸಲು ಹಿಂದೇಟು ಹಾಕಿ ಮತ್ತೆ ಟ್ರಾಫಿಕ್ ನಿಯಮಗಳನ್ನು ಮುರಿಯುತ್ತಿದ್ದಾರೆ.
ಕಳೆದ ಮೂರು ವರ್ಷಗಳಲ್ಲಿ 95 ಲಕ್ಷಕ್ಕೂ ಹೆಚ್ಚು ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳಿಂದ 395 ಕೋಟಿ ರೂ.ಗೂ ಅಧಿಕ ಬಾಕಿ ಉಳಿಸಿಕೊಂಡಿರುವ ವಾಹನ ಮಾಲೀಕರಿಗೆ ಬಿಸಿ ಮುಟ್ಟಿಸಲು ನಗರ ಸಂಚಾರ ಪೊಲೀಸರು ಮುಂದಾಗಿದ್ದಾರೆ.
ಕೊರೊನಾ ಹಿನ್ನೆಲೆಯಲ್ಲಿ ಸಂಚಾರ ಪೊಲೀಸರು ಭೌತಿಕವಾಗಿ ವಾಹನಗಳನ್ನು ತಡೆಯದೆ ದಂಡ ವಸೂಲಿ ಮಾಡುವುದು ನಿಲ್ಲಿಸಲಾಗಿದೆ. ಮುಖ್ಯವಾಗಿ ಸಂಚಾರ ದಟ್ಟಣೆ ಅವಧಿ ವೇಳೆ ಸುಗಮ ಸಂಚಾರಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ನಗರದ ಪ್ರತಿಯೊಂದು ಸಿಗ್ನಲ್‌ಗಳಲ್ಲಿ ವಾಹನ ಚಾಲಕರು ನಿಯಮಗಳನ್ನು ಗಾಳಿಗೆ ತೂರಿ ಅಪಾಯಕಾರಿ ರೀತಿಯಲ್ಲಿ ವಾಹನ ಚಾಲನೆ ಹಲವಾರು ಪ್ರಕರಣಗಳನ್ನು ಎರಡು ರೀತಿಯಲ್ಲಿ ದಾಖಲಿಸಲಾಗುತ್ತಿದೆ. ವಾಹನ ಸವಾರರನ್ನು ತಡೆದು ಸ್ಥಳದಲ್ಲಿಯೇ ದಂಡ ವಿಧಿಸಿ, ಅದನ್ನು ವಸೂಲಿ ಮಾಡಲು ಅಥವಾ ನ್ಯಾಯಾಲಯಕ್ಕೆ ಹಾಜರಾಗಿ ದಂಡ ಕಟ್ಟಲು ಕ್ರಮ ಕೈಗೊಳ್ಳಲಾಗುತ್ತಿದೆ.
ಸಂಚಾರ ಕಾವಲು ಕ್ಯಾಮರಾಗಳ ಮೂಲಕ ಸಂಚಾರ ಪೊಲೀಸರು ಹೊಂದಿರುವ ಡಿಜಿಟಲ್ ಕ್ಯಾಮರಾಗಳ ಮೂಲಕ ಉಲ್ಲಂಘನೆ ಪ್ರಕರಣ ದಾಖಲಿಸಲಾಗುತ್ತಿದೆ. ಉಲ್ಲಂಘಿಸಿದ ವಾಹನ ಮಾಲೀಕರಿಗೆ ದಂಡ ಪಾವತಿಸುವಂತೆ ನೊಟೀಸ್ ಜಾರಿ ಮಾಡಿದರೂ ಕೆಲವೇ ಮಂದಿ ದಂಡ ಪಾವತಿಸಿದ್ದಾರೆ.
ಇದನ್ನೂ ಓದಿ: ತೈಲ ಬೆಲೆ ಏರಿಕೆ, ಖಾಸಗೀಕರಣ ವಿರೋಧಿಸಿ ಕಾಂಗ್ರೆಸ್ ಕೇಂದ್ರದ ಅಣಕು ಶವಯಾತ್ರೆ
ಬಹುತೇಕ ಸವಾರರು ನೀಡಿದ ನೊಟೀಸ್ ನಿರ್ಲಕ್ಷ್ಯಿಸಿ ಮತ್ತೆ ಸಂಚಾರಿ ನಿಯಮ ಉಲ್ಲಂಘಿಸುತ್ತಿರುವುದು ಕಂಡು ಬಂದಿದೆ. ಇದರಿಂದ ಕಳೆದ ಮೂರು ವರ್ಷಗಳಲ್ಲಿ 95 ಲಕ್ಷಕ್ಕೂ ಹೆಚ್ಚು ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣ ದಾಖಲಾಗಿ 395 ಕೋಟಿ ರೂಪಾಯಿ ದಂಡ ವಸೂಲಿ ಮಾಡಬೇಕಾಗಿರುವುದರಿಂದ ಟ್ರಾಫಿಕ್ ಪೊಲೀಸರು ವಾಹನ ಸವಾರರನ್ನು ತಡೆದು ದಂಡ ವಸೂಲಿ ಮಾಡಲು ಮುಂದಾಗಿದ್ದಾರೆ.