ಬೆಂಗಳೂರು: ಕರ್ನಾಟಕ ವಿಧಾನಸಭೆಯ ಸರ್ಕಾರಿ ಭರವಸೆಗಳ ಸಮಿತಿಯ (2019-20) ನೇ ಸಾಲಿನ 8ನೇ ವರದಿಯನ್ನು ಸರ್ಕಾರಿ ಭರವಸೆಗಳ ಸಮಿತಿ ಅಧ್ಯಕ್ಷ ಕೆ.ರಘುಪತಿ ಭಟ್ ವಿಧಾನಸಭೆಯಲ್ಲಿ ಇಂದು ಮಂಡಿಸಿದರು.
ಓದಿ: ಕಾರವಾರ: ಕಾಡಿನಲ್ಲಿ ಗೋಚರಿಸುತ್ತಿದ್ದ ಬೆಳಕು... ನಿಗೂಢ ರಹಸ್ಯ ಬಯಲಿಗೆಳೆದ ಅರಣ್ಯಾಧಿಕಾರಿಗಳು!
ವಿಧಾನ ಮಂಡಲ ಅಧಿವೇಶನದಲ್ಲಿ ಸಚಿವರು ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ಸಂಬಂಧಪಟ್ಟ ಇಲಾಖೆಗಳ ಮುಖ್ಯಸ್ಥರು ವಿಫಲರಾಗಿದ್ದಾರೆ. ಸಚಿವರು ಸದನದಲ್ಲಿ ನೀಡಿರುವ ಭರವಸೆಗಳು ಭರವಸೆಗಳಾಗಿಯೇ ಉಳಿದಿವೆ ಎಂದು ಅಸಮಾಧಾನ ವ್ಯಕ್ತಪಡಿಸಲಾಗಿದೆ.
ಅಧಿವೇಶನ ಹಾಗೂ ನಂತರದ ಸಂದರ್ಭಗಳಲ್ಲಿ ಕೇಳಿ ಬರುವ ಆರೋಪ, ಅವ್ಯಹಾರ, ಹಣ ದುರುಪಯೋಗ ಸೇರಿದಂತೆ ಅಕ್ರಮಗಳ ಬಗ್ಗೆ ನಿಗದಿತ ಸಮಯದ ಒಳಗೆ ಕ್ರಮ ಕೈಗೊಳ್ಳುವ ಭರವಸೆಯನ್ನು ಸರ್ಕಾರ ಹಾಗೂ ಸಚಿವರು ನೀಡಿದ್ದಾರೆ. ಸದನದಲ್ಲಿ ಸಚಿವರುಗಳು ನೀಡಿದ ಭರವಸೆ ಜಾರಿಗೊಳಿಸದೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಹಿಂದುಳಿದ ವರ್ಗಗಳಿಗೆ ಸಂಬಂಧಪಟ್ಟ ಭರವಸೆಗಳು ಈಡೇರದಿರುವುದಕ್ಕೆ ಅನುದಾನ ಕೊರತೆಯೂ ಕಾರಣವಾಗಿದ್ದು, ಸರ್ಕಾರ ಈ ಇಲಾಖೆಗೆ ಸೂಕ್ತ ಅನುದಾನವನ್ನು ಬಿಡುಗಡೆ ಮಾಡಬೇಕೆಂದು ಸಮಿತಿ ಶಿಫಾರಸು ಮಾಡಿದೆ.
ಸಣ್ಣ ನೀರಾವರಿ, ಹಿಂದುಳಿದ ವರ್ಗಗಳ ಕಲ್ಯಾಣ, ಸಹಕಾರ, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ, ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಗಳಿಗೆ ಸಂಬಂಧಪಟ್ಟ ಒಟ್ಟು 99 ಭರವಸೆಗಳನ್ನು ಸುದೀರ್ಘವಾಗಿ ಚರ್ಚಿಸಿ ಆ ಪೈಕಿ 87 ಭರವಸೆಗಳನ್ನು ಮುಕ್ತಾಯಗೊಳಿಸಿದ್ದು, 12 ಭರವಸೆಗಳಿಗೆ ಹೆಚ್ಚುವರಿ ಮಾಹಿತಿಯನ್ನು ಬಯಸಿ ಕಾಯ್ದಿರಿಸಿದೆ. ಈ ಕುರಿತು ಸಂಬಂಧಪಟ್ಟ ಇಲಾಖೆಗಳಿಗೆ ಪತ್ರ ಬರೆಯಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.