ಬೆಂಗಳೂರು: ಅಧಿಕಾರ ವಿಕೇಂದ್ರಿಕರಣ ಆಗಬೇಕೆಂದು ಪ್ರತಿಪಾದಿಸುವ ಎಲ್ಲಾ ರಾಜಕೀಯ ಪಕ್ಷಗಳು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ರಾಜಕೀಯ ಹಿನ್ನೆಲೆ ಇರುವ ಅಭ್ಯರ್ಥಿಗಳಿಗೆ ಮನ್ನಣೆ ನೀಡಿವೆ. ರಾಜ್ಯದ 28 ಕ್ಷೇತ್ರಗಳ ಪೈಕಿ 22 ಕ್ಷೇತ್ರಗಳಲ್ಲಿ ರಾಜಕಾರಣಿಗಳ ತಂದೆ, ಮಕ್ಕಳು, ಸಹೋದರರು, ಹೆಂಡತಿ, ಮೊಮ್ಮಕ್ಕಳು, ಬೀಗರುಗಳೇ ಅಖಾಡಕ್ಕಿಳಿದಿದ್ದಾರೆ.
ಕುಟುಂಬ ರಾಜಕಾರಣವನ್ನ ಕಟುವಾಗಿ ಟೀಕಿಸುತ್ತಲೇ ರಾಜಕೀಯ ಪಕ್ಷಗಳು ರಾಜ್ಯದಲ್ಲಿ ವಂಶಪಾರಂಪರ್ಯ ರಾಜಕಾರಣಕ್ಕೆ ಜೈ ಎಂದಿವೆ. ಜೆಡಿಎಸ್ನಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಮತ್ತವರ ಇಬ್ಬರು ಮೊಮ್ಮಕ್ಕಳು ಮೂರು ಪ್ರತ್ಯೇಕ ಕ್ಷೇತ್ರಗಳಲ್ಲಿ ಚುನಾವಣೆಗೆ ನಿಂತಿರುವುದು ಬಹಳಷ್ಟು ಚರ್ಚೆಗೆ ವೇದಿಕೆಯಾಗಿದೆ. ರಾಜ್ಯದಲ್ಲಿ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ರಾಜಕೀಯ ಕುಟುಂಬಕ್ಕೆ ಸೇರಿದ ಅಭ್ಯರ್ಥಿಗಳು ಚುನಾವಣೆ ಕಣಕ್ಕೆ ಇಳಿದಿದ್ದಾರೆ. ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿ ಮೂರೂ ಪಕ್ಷಗಳು ಪೈಪೋಟಿಗೆ ಇಳಿದಂತೆ ರಾಜಕಾರಣದ ಹಿನ್ನೆಲೆ ಇರುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿ ಅಧಿಕಾರ ವಿಕೇಂದ್ರಿಕರಣ ತತ್ವವನ್ನು ಗಾಳಿಗೆ ತೂರಿ ಗೆಲುವಿನ ಮಂತ್ರಕ್ಕೆ ಮಣೆ ಹಾಕಿವೆ.
ಐಎಎಸ್, ಐಪಿಎಸ್ ಅಧಿಕಾರಿಗಳ ಮಕ್ಕಳು ಅಧಿಕಾರಿಗಳಾದಂತೆ, ವ್ಯಾಪಾರಸ್ಥರ ಮಕ್ಕಳು ವ್ಯಾಪಾರಿಗಳಾದಂತೆ, ವೈದ್ಯರ ಮಕ್ಕಳು ವೈದ್ಯರಾದಂತೆ, ರಾಜಕಾರಣಿಗಳ ಮಕ್ಕಳು ರಾಜಕಾರಣಕ್ಕೆ ಬಂದರೆ ತಪ್ಪೇನು ಎಂದು ಪ್ರಶ್ನಿಸುತ್ತಲೇ ಲೋಕಸಭೆ ಚುನಾವಣೆಯಲ್ಲಿ ಕುಟುಂಬ ರಾಜಕಾರಣದ ಛಾಯೆ ಎದ್ದು ಕಾಣುತ್ತಿದೆ. ಆದ್ರೆ ಹಿಂದೆಂದೂ ಕಾಣದಷ್ಟು ಕುಟುಂಬ ರಾಜಕಾರಣ ಈ ಬಾರಿ ವಿಜೃಂಭಿಸುತಿದ್ದು ಶೇಕಡ ಎಪ್ಪತೈದಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ತಮ್ಮ ಸಂಬಂಧಿಕರಿಗೆ ಟಿಕೆಟ್ ಕೊಡಿಸಿ ಅವರ ಗೆಲುವಿಗೆ ಶಾಸಕರಾಗಿರುವವರು, ಸಚಿವರಾಗಿರುವರು, ಮುಖ್ಯಮಂತ್ರಿಗಳಾದವರು, ಸಂಸದರಾಗಿರುವವರು ಶತಪ್ರಯತ್ನ ನಡೆಸುತಿದ್ದಾರೆ.
ಫ್ಯಾಮಿಲಿ ಪಾಲಿಟಿಕ್ಸ್
ಹಾಸನ: ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಅವರ ಪುತ್ರ ಹಾಗೂ ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ (ಜೆಡಿಎಸ್).
ಮಂಡ್ಯ: ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗು ರಾಮನಗರ ಶಾಸಕಿ ಅನಿತಾಕುಮಾರಸ್ವಾಮಿ ದಂಪತಿ ಪುತ್ರ ಮತ್ತು ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ( ಜೆಡಿಎಸ್ ), ಇನ್ನೊಂದೆಡೆ ಮಾಜಿ ಸಚಿವ ಹಾಗು ನಟ ದಿ.ಅಂಬರೀಶ್ ಅವರ ಪತ್ನಿ ಸುಮಲತಾ ಅಂಬರೀಶ್ (ಪಕ್ಷೇತರ).
ಬೆಂಗಳೂರು ದಕ್ಷಿಣ: ಬೆಂಗಳೂರಿನ ಬಸವನಗುಡಿ ಕ್ಷೇತ್ರದ ಶಾಸಕ ರವಿಸುಬ್ರಹ್ಮಣ್ಯ ಅವರ ಸಹೋದರನ ಮಗ ತೇಜಸ್ವಿ ಸೂರ್ಯ (ಬಿಜೆಪಿ).
ಬೆಂಗಳೂರು ಗ್ರಾಮಾಂತರ: ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಸಹೋದರ ಡಿ.ಕೆ ಸುರೇಶ್ (ಕಾಂಗ್ರೆಸ್).
ಕೋಲಾರ: ಶಾಸಕಿ ರೂಪಾ ಶಶಿಧರ್ ಅವರ ತಂದೆ ಮಾಜಿ ಕೇಂದ್ರ ಸಚಿವ ಕೆ.ಹೆಚ್. ಮುನಿಯಪ್ಪ (ಕಾಂಗ್ರೆಸ್).
ತುಮಕೂರು: ಶಾಸಕ ಜ್ಯೋತಿ ಗಣೇಶ್ ಅವರ ತಂದೆ ಮಾಜಿ ಸಂಸದ ಜೆ.ಎಸ್ ಬಸವರಾಜು (ಬಿಜೆಪಿ), ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗು ಸಚಿವ ರೇವಣ್ಣ ಅವರ ತಂದೆ ಮಾಜಿ ಪ್ರಧಾನಿ ದೇವೇಗೌಡ (ಜೆಡಿಎಸ್).
ಬೆಂಗಳೂರು ಉತ್ತರ: ಮಾಜಿ ಸಚಿವ ಹಿರಿಯ ರಾಜಕಾರಣಿ ದಿ.ಭೈರೇಗೌಡ ಅವರ ಪುತ್ರ ಸಚಿವ ಕೃಷ್ಣ ಭೈರೇಗೌಡ(ಕಾಂಗ್ರೆಸ್).
ಚಾಮರಾಜನಗರ: ನಂಜನಗೂಡಿನ ಶಾಸಕ ಬಿ.ಹರ್ಷವರ್ಧನ ಅವರ ಮಾವ ಮಾಜಿ ಸಚಿವ ವಿ.ಶ್ರೀನಿವಾಸ ಪ್ರಸಾದ್ (ಬಿಜೆಪಿ)
ದಾವಣಗೆರೆ:ಮಾಜಿ ಸಂಸದ ಜಿ. ಮಲ್ಲಿಕಾರ್ಜುನಪ್ಪ ಅವರ ಪುತ್ರ ಜಿ.ಎಂ.ಸಿದ್ದೇಶ್ವರ (ಬಿಜೆಪಿ).
ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಪುತ್ರ ಬಿ.ವೈ.ರಾಘವೇಂದ್ರ ( ಬಿಜೆಪಿ), ಮಾಜಿ ಮುಖ್ಯಮಂತ್ರಿ ದಿ.ಎಸ್.ಬಂಗಾರಪ್ಪನವರ ಪುತ್ರ ಮಧು ಬಂಗಾರಪ್ಪ (ಜೆಡಿಎಸ್)
ಹಾವೇರಿ: ಮಾಜಿ ಸಚಿವ ಹಾಗೂ ಹಿರಿಯ ರಾಜಕಾರಣಿ ಸಿಎಂ ಉದಾಸಿ ಅವರ ಪುತ್ರ ಶಿವಕುಮಾರ ಉದಾಸಿ (ಬಿಜೆಪಿ), ಶಾಸಕ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಚಿವ ಹೆಚ್.ಕೆ.ಪಾಟೀಲ್ ಸಹೋದರ ಡಿ.ಆರ್.ಪಾಟೀಲ್ (ಕಾಂಗ್ರೆಸ್).
ಬೆಳಗಾವಿ: ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಬೀಗರಾದ ಸುರೇಶ್ ಅಂಗಡಿ (ಬಿಜೆಪಿ)
ಚಿಕ್ಕೋಡಿ: ಶಾಸಕಿ ಶಶಿಕಲಾ ಜೊಲ್ಲೆ ಅವರ ಪತಿ ಕೈಗಾರಿಕೋದ್ಯಮಿ ಅಣ್ಣಾ ಸಾಹೇಬ್ ಜೊಲ್ಲೆ (ಬಿಜೆಪಿ),ಶಾಸಕ ಗಣೇಶ್ ಹುಕ್ಕೇರಿ ಅವರ ತಂದೆ ಪ್ರಕಾಶ್ ಹುಕ್ಕೇರಿ (ಕಾಂಗ್ರೆಸ್).
ಕಲಬುರಗಿ:ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಅವರ ತಂದೆ ಮಲ್ಲಿಕಾರ್ಜುನ ಖರ್ಗೆ (ಕಾಂಗ್ರೆಸ್).
ಬೀದರ್: ಮಾಜಿ ಸಚಿವ ಬೀಮಣ್ಣ ಖಂಡ್ರೆ ಅವರ ಪುತ್ರ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, (ಕಾಂಗ್ರೆಸ್).
ಬಾಗಲಕೋಟೆ:ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಪತ್ನಿ ವೀಣಾ ಕಾಶಪ್ಪನವರ (ಕಾಂಗ್ರೆಸ್).
ವಿಜಯಪುರ: ನಾಗಠಾಣ ಕ್ಷೇತ್ರದ ಶಾಸಕ ದೇವಾನಂದ ಚೌಹಾಣ್ ಅವರ ಪತ್ನಿ ಡಾ. ಸುನೀತಾ ದೇವಾನಂದ ಚೌಹಾಣ್ (ಜೆಡಿಎಸ್).
ಕೊಪ್ಪಳ: ಶಾಸಕ ರಾಘವೇಂದ್ರ ಹಿಟ್ನಾಳ್ ಅವರ ತಂದೆ ಬಸವರಾಜ ಹಿಟ್ನಾಳ್ (ಕಾಂಗ್ರೆಸ್).
ಉಡುಪಿ-ಚಿಕ್ಕಮಗಳೂರು: ಮಾಜಿ ಸಚಿವೆ ಮನೋರಮಾ ಮಧ್ವರಾಜ್ ಅವರ ಪುತ್ರ ಪ್ರಮೋದ್ ಮದ್ವರಾಜ್ (ಜೆಡಿಎಸ್).
ಉತ್ತರ ಕನ್ನಡ: ಮಾಜಿ ಶಾಸಕ ವಸಂತ ಆಸ್ನೋಟಿಕರ್ ಪುತ್ರ ಆನಂದ ಆಸ್ನೋಟಿಕರ್ (ಜೆಡಿಎಸ್).
ರಾಯಚೂರು:ಮಾಜಿ ಸಂಸದ ರಾಜಾ ವೆಂಕಟಪ್ಪನಾಯಕ ಅವರ ಸಹೋದರ ಮಾಜಿ ಸಚಿವ ಅಮರೇಶ್ವರ ನಾಯಕ (ಬಿಜೆಪಿ).
ಬಳ್ಳಾರಿ:ಮಾಜಿ ಸಚಿವ ಶ್ರೀ ರಾಮುಲು ಅವರ ಮಾವ ದೇವೇಂದ್ರಪ್ಪ (ಬಿಜೆಪಿ).
ಲೋಕಸಭೆ ಚುನಾವಣೆಯಲ್ಲಿ ಶತಾಯ ಗತಾಯ ಗೆಲ್ಲುವ ಉದ್ದೇಶದಿಂದ ಪಕ್ಷಗಳು ರಾಜಕೀಯ ಹಿನ್ನೆಲೆಯುಳ್ಳ ಅಭ್ಯರ್ಥಿಗಳಿಗೆ ಮಣೆ ಹಾಕಿವೆ. ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಮೂರೂ ಪ್ರಮುಖ ಪಕ್ಷಗಳು ಚುನಾವಣೆಯಲ್ಲಿ ತಮ್ಮ ಕುಟುಂಬದವರನ್ನು ಕಣಕ್ಕೆ ಇಳಿಸಿರುವುದರಿಂದ ಚುನಾವಣೆ ಪ್ರಚಾರ ಸಂದರ್ಭದಲ್ಲಿ ಕುಟುಂಬ ರಾಜಕಾರಣವನ್ನ ಟೀಕಿಸುವ ನೈತಿಕತೆ ಕಳೆದುಕೊಂಡಿವೆ. ಫ್ಯಾಮಿಲಿ ಪಾಲಿಟಿಕ್ಸ್ನಿಂದಾಗಿ ಅಧಿಕಾರ ವಿಕೇಂದ್ರಿಕರಣ ವಾಗುವ ಬದಲು ಕೆಲವೇ ಕುಟುಂಬಗಳಲ್ಲಿ ಅಧಿಕಾರ ಕೇಂದ್ರೀಕರಣಗೊಂಡಿದ್ದು, ಇದು ವಿಶ್ವದಲ್ಲೇ ಅತಿ ದೊಡ್ಡದಾದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಅಣಕಿಸುವಂತಿದೆ.