ಬೆಂಗಳೂರು: ನಗರದಲ್ಲಿ ಒಂದೂಕಾಲು ಕೋಟಿ ಜನಸಂಖ್ಯೆ ಮಾನದಂಡದ ಪ್ರಕಾರ 1600 ಶೌಚಾಲಯಗಳು ಇರಬೇಕು. ಆದರೆ 585 ಶೌಚಾಲಯಗಳು ಮಾತ್ರ ಇದ್ದು, ಶೇ. 60ರಷ್ಟು ಬಳಕೆಗೆ ಅಸಾಧ್ಯವಾಗಿ ನಿರ್ವಹಣೆಯಿಲ್ಲದೆ ಬೀಗ ಹಾಕಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ನಗರದಲ್ಲಿ ಬಯಲು ಶೌಚ ಮಾಡುವ ನೂರಾರು ಎಲ್ಲೋ ಸ್ಪಾಟ್ಗಳಿವೆ. ಇವುಗಳ ನಿರ್ಮೂಲನೆಗೆ ಬಿಬಿಎಂಪಿ ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಈಗಾಗಲೇ ಮೈ ಸಿಟಿ ಮೈ ಬಜೆಟ್ ಕಾರ್ಯಕ್ರಮದಲ್ಲಿ ಶೌಚಾಲಯಗಳ ಅಗತ್ಯದ ಬಗ್ಗೆ ಸರ್ವೇ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಜನರ ಅಭಿಪ್ರಾಯ ಸಂಗ್ರಹಿಸಿ ಶೌಚಾಲಯಗಳ ನಿರ್ಮಾಣಕ್ಕೆ ಒತ್ತು ನೀಡಲು 2021-22ನೇ ಸಾಲಿನ ಬಜೆಟ್ನಲ್ಲಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಇನ್ನು ಶೌಚಾಲಯಗಳನ್ನು ಸರಿಯಾಗಿ ನಿರ್ವಹಿಸದಿರುವುದಿಂದ ಸಾಕಷ್ಟು ತೊಂದರೆಯಾಗಿದೆ. ಇದಕ್ಕೆ ಪಾಲಿಕೆ ನಿರ್ಲಕ್ಷ್ಯ ಕಾರಣ ಎಂದು ಸ್ಥಳೀಯರು ದೂರಿದ್ದಾರೆ. ಶೌಚಾಲಯಗಳಲ್ಲಿ ನಿಯಮಗಳ ಪ್ರಕಾರ ಟೈಲ್ಸ್ ಹಾಕಿದ ನೆಲ, ಪ್ರತಿ ಗಂಟೆಗೊಮ್ಮೆ ಸ್ವಚ್ಛಗೊಳಿಸುವುದು, ಟಿಶ್ಯೂ ಪೇಪರ್, ಕೈ ತೊಳೆಯಲು ಸೋಪು ಇಡಬೇಕು. ಈಗ ಶೌಚಾಲಯಗಳನ್ನು ವ್ಯವಸ್ಥಿತವಾಗಿ ನವೀಕರಣ ಮಾಡಲಾಗುತ್ತಿದೆ ಎಂದು ಪಾಲಿಕೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.