ಬೆಂಗಳೂರು: ಪ್ರವಾಹ ಮತ್ತು ಭಾರೀ ಮಳೆಯಿಂದ ಹಾನಿಗೊಳಗಾಗಿರುವ ಜಿಲ್ಲೆಗಳಲ್ಲಿ ಅತಿವೃಷ್ಟಿ ನಿರ್ವಹಣೆಗೆ ಹಿರಿಯ ಐಎಎಸ್ ಅಧಿಕಾರಿಗಳನ್ನು ಮೇಲ್ವಿಚಾರಣೆ ಅಧಿಕಾರಿಗಳನ್ನಾಗಿ ರಾಜ್ಯ ಸರ್ಕಾರ ನೇಮಕ ಮಾಡಿದೆ.
ಸಚಿವ ಸಂಪುಟ ವಿಸ್ತರಣೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಸಚಿವರ ಅನುಪಸ್ಥಿತಿಯಲ್ಲಿ ಉನ್ನತ ಅಧಿಕಾರಿಗಳು ಅತಿವೃಷ್ಟಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಈ ನೇಮಕ ಮಾಡಲಾಗಿದೆ ಎಂದು ಹೇಳಲಾಗಿದೆ.
ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್ ಗೋಯಲ್ ಅವರನ್ನು ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆ, ಐಟಿ ಬಿಟಿ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ. ಇ.ವಿ.ರಮಣರೆಡ್ಡಿ ಅವರನ್ನು ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆ, ಅಪರ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ ಅವರನ್ನು ರಾಯಚೂರು ಮತ್ತು ಯಾದಗಿರಿ ಜಿಲ್ಲೆಗೆ, ಅಪರ ಮುಖ್ಯ ಕಾರ್ಯದರ್ಶಿ ಡಾ. ಸಂದೀಪ್ ದವೆ ಅವರನ್ನು ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆ, ಅಪರ ಮುಖ್ಯ ಕಾರ್ಯದರ್ಶಿ ರಾಜೀವ್ ಚಾವ್ಲಾ ಅವರನ್ನು ಶಿವಮೊಗ್ಗ ಜಿಲ್ಲೆ, ಅಪರ ಮುಖ್ಯ ಕಾರ್ಯದರ್ಶಿ ಡಾ. ರಾಜಕುಮಾರ್ ಖತ್ರಿ ಅವರನ್ನು ಹಾಸನ ಮತ್ತು ಕೊಡಗು ಜಿಲ್ಲೆಗಳ ಮೇಲ್ವಿಚಾರಣೆ ಅಧಿಕಾರಿಗಳನ್ನಾಗಿ ಸರ್ಕಾರ ನೇಮಿಸಿದೆ.
ಜಿಲ್ಲಾ ಆಡಳಿತ ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಪರಿಹಾರ ಕಾರ್ಯಗಳನ್ನು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ನಡೆಸಲು ಸೂಚಿಸಲಾಗಿದೆ.