ಬೆಂಗಳೂರು: ಕೊರೊನಾ ಸೋಂಕಿತರಿಗೆ ಸರ್ಕಾರ ನಿಗದಿ ಮಾಡಿದಂತೆ ಶೇ 50ರಷ್ಟು ಬೆಡ್ಗಳನ್ನು ನೀಡುವುದಕ್ಕೆ ಬೆಂಗಳೂರಿನ ರಾಜಾಜಿನಗರ ಹಾಗೂ ಮಹಾಲಕ್ಷ್ಮಿ ಲೇಔಟ್ನ ಎರಡು ಖಾಸಗಿ ಆಸ್ಪತ್ರೆಗಳ ಮನವೊಲಿಸುವಲ್ಲಿ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ್ ಯಶಸ್ವಿಯಾಗಿದ್ದಾರೆ.
ಕೋವಿಡ್-19 ರೋಗಿಗಳಿಗೆ ಯಾವುದೇ ಕಾರಣಕ್ಕೂ ಹಾಸಿಗೆಗಳ ಕೊರತೆಯಾಗದಂತೆ ಎಚ್ಚರಿಕೆ ವಹಿಸಿರುವ ಸರ್ಕಾರ, ಖಾಸಗಿ ಆಸ್ಪತ್ರೆಗಳಿಂದ ನಿಗದಿತ ಶೇ.50ರಷ್ಟು ಹಾಸಿಗೆಗಳನ್ನು ಪಡೆಯುವ ನಿಟ್ಟಿನಲ್ಲಿ ಎಲ್ಲಾ ಕ್ರಮಗಳನ್ನು ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಇಂದು ಡಿಸಿಎಂ ಅಶ್ವತ್ಥನಾರಾಯಣ್ ನಗರದ ರಾಜಾಜಿನಗರ, ಮಹಾಲಕ್ಷ್ಮೀ ಲೇಔಟ್ನ ಎರಡು ಖಾಸಗಿ ಆಸ್ಪತ್ರೆಗಳ ಮಾಲೀಕರು, ವ್ಯವಸ್ಥಾಪಕರ ಜತೆ ಮಾತುಕತೆ ನಡೆಸಿದರು.
ಅನಿರೀಕ್ಷಿತವಾಗಿ ಕೋವಿಡ್ ಸೋಂಕು ಎದುರಾಗಿದ್ದು, ಸಂಕಷ್ಟದ ಸನ್ನಿವೇಶ ಬಂದಿದೆ. ಇಂತಹ ಸಂದರ್ಭದಲ್ಲಿ ಪ್ರತಿಯೊಬ್ಬರೂ ಜವಾಬ್ದಾರಿಯಿಂದ ವರ್ತಿಸಬೇಕು. ಅಲ್ಲದೇ ಅಷ್ಟೇ ಹೊಣೆಗಾರಿಕೆಯಿಂದ ಎಲ್ಲರೂ ಸಹಕಾರ ನೀಡಬೇಕಾಗಿದೆ. ಇದರ ಜತೆಯಲ್ಲೇ ಸರ್ಕಾರ ಸಾಕಷ್ಟು ಮುನ್ನಚ್ಚರಿಕೆಯಿಂದ ಕೆಲಸ ಮಾಡುತ್ತಿದೆ. ಅಕ್ಟೋಬರ್ ಹೊತ್ತಿಗೆ ಸೋಂಕು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಐಸಿಎಂಆರ್ ಈಗಾಗಲೇ ಎಚ್ಚರಿಕೆ ನೀಡಿದೆ. ಹೀಗಾಗಿ ಸರ್ಕಾರ ಎಲ್ಲ ರೀತಿಯಲ್ಲೂ ಸಜ್ಜಾಗಬೇಕು.
ಆದ್ದರಿಂದ ಎರಡೂ ಕ್ಷೇತ್ರಗಳಲ್ಲಿರುವ ಖಾಸಗಿ ಆಸ್ಪತ್ರೆಗಳು ಕೂಡಲೇ ತಮ್ಮಲ್ಲಿರುವ ಒಟ್ಟು ಹಾಸಿಗೆಗಳ ಪೈಕಿ ಶೇ.50ರಷ್ಟನ್ನು ಸರ್ಕಾರಕ್ಕೆ ನೀಡಲೇಬೇಕು ಎಂದು ಡಿಸಿಎಂ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರಿಗೆ ಮನವರಿಕೆ ಮಾಡಿ, ಕೊರೊನಾ ರೋಗಿಗಳಿಗೆ ಬೆಡ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.