ಬೆಂಗಳೂರು: ರೇಷ್ಮೆ ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ 50 ಕೋಟಿ ರೂ. ಅನುದಾನ ನೀಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ತೋಟಗಾರಿಕಾ ಸಚಿವ ಡಾ. ನಾರಾಯಣ ಗೌಡ ಮನವಿ ಮಾಡಿದ್ದಾರೆ.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾಗೆ ಭೇಟಿ ನೀಡಿದ ಸಚಿವ ನಾರಾಯಣಗೌಡ, ಅಗತ್ಯ ಅನುದಾನದ ವಿಚಾರವಾಗಿ ಡಿಸಿಎಂ ಅಶ್ವತ್ಥ್ ನಾರಾಯಣ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಭಾಗಿಯಾದರು.
ರೇಷ್ಮೆ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಸರ್ಕಾರ ಅವರ ನೆರವಿಗೆ ಧಾವಿಸಲೇಬೇಕು. ಈಗಾಗಲೇ ಇಲಾಖೆಯಿಂದ ರೇಷ್ಮೆ ನೂಲು ಬಿಚ್ಚಣಿಕೆದಾರರ ಕಚ್ಚಾ ರೇಷ್ಮೆಯನ್ನ ಅಡಮಾನವಾಗಿ ಇಟ್ಟು ಸಾಲ ನೀಡಲಾಗುತ್ತಿದೆ. ಹೀಗಾಗಿ ಹೆಚ್ಚಿನ ಅನುದಾನ ದೊರಕಿದಲ್ಲಿ ರೇಷ್ಮೆ ಬೆಳೆಗಾರರ ಸಮಸ್ಯೆ ಪರಿಹರಿಸಬಹುದು. ಅದಕ್ಕೆ ಅಗತ್ಯ ಇರುವ ಅನುದಾನ ದೊರಕುವಂತಾಗಬೇಕು. ಈ ನಿಟ್ಟಿನಲ್ಲಿ ಇಲಾಖೆಯಿಂದ ಈಗಾಗಲೇ ಪ್ರಸ್ತಾವನೆ ಕೂಡ ಸಿದ್ಧಪಡಿಸಲಾಗಿದೆ ಎಂದು ಸಭೆಯಲ್ಲಿ ಪ್ರಸ್ತಾಪಿಸಿದ್ದರು.
ನಂತರ ಸಿಎಂ ಅವರನ್ನು ಭೇಟಿಯಾದ ಸಚಿವರು, ರಾಜ್ಯದಲ್ಲಿ ಪ್ರಸ್ತುತ ಲಾಕ್ಡೌನ್ ಪರಿಸ್ಥಿತಿಯಲ್ಲಿ ರೇಷ್ಮೆ ಗೂಡಿನ ದರ ಕುಸಿದಿದೆ. ಈ ರೇಷ್ಮೆ ಗೂಡನ್ನ ಖರೀದಿಸುವ ರೇಷ್ಮೆ ನೂಲು ಬಿಚ್ಚಾಣಿಕೆದಾರರು ಕಡಿಮೆ ದರದಲ್ಲಿ ಖರೀದಿಸುತ್ತಿರುವುದರಿಂದ ರಾಜ್ಯಾದ್ಯಂತ ಸುಮಾರು ಒಂದೂವರೆ ಲಕ್ಷ ರೇಷ್ಮೆ ಬೆಳೆಗಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಲ್ಲದೆ ರೇಷ್ಮೆ ನೂಲನ್ನ ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ (ಕೆಎಸ್‍ಎಮ್‍ಬಿ) ವತಿಯಿಂದ ತಾಂತ್ರಿಕ ಸಮಿತಿ ನಿಗದಿಪಡಿಸಿರುವ ದರಗಳಲ್ಲಿ ಖರೀದಿಸುವುದು/ ನಿಯಮಾನುಸಾರ ಒತ್ತೆ ಇಟ್ಟು ಸಾಲ ನೀಡಿದ್ದಲ್ಲಿ, ನೇರವಾಗಿ ರಾಜ್ಯದಲ್ಲಿ ಸಮಸ್ತ ರೇಷ್ಮೆ ಬೆಳೆಗಾರರಿಗೆ ಅನುಕೂಲವಾಗುತ್ತದೆ.
ಈ ಹಿನ್ನೆಲೆಯಲ್ಲಿ ರೇಷ್ಮೆ ಇಲಾಖೆಗೆ ಅಗತ್ಯವಿರುವ 50 ಕೋಟಿ ಅನುದಾನವನ್ನು ಒದಗಿಸುವಂತೆ ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಮಾಡಿದರು. ಸಚಿವರ ಮನವಿಯನ್ನ ಆಲಿಸಿರುವ ಮುಖ್ಯಮಂತ್ರಿಗಳು, ಶೀಘ್ರದಲ್ಲಿಯೇ ಪರಿಶೀಲಿಸಿ ಅನುಮೋದನೆ ದೊರಕಿಸಿಕೊಡುವ ಭರವಸೆ ನೀಡಿದ್ದಾರೆ.