ಬೆಂಗಳೂರು: ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಅಕ್ಟೋಬರ್ 17ರಂದು (ನಾಳೆ) ಚುನಾವಣೆ ನಡೆಯಲಿದೆ. ಕಣದಲ್ಲಿ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಕೇಂದ್ರ ಸಚಿವ ಶಶಿ ತರೂರ್ ಇದ್ದಾರೆ. ಖರ್ಗೆಯವರ ಆಯ್ಕೆ ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.
![ಮಾಜಿ ಕೇಂದ್ರ ಸಚಿವ ಶಶಿ ತರೂರ್](https://etvbharatimages.akamaized.net/etvbharat/prod-images/kn-bng-01-mallikarjun-kharge-pc-script-7208077_16102022153150_1610f_1665914510_195.jpg)
ದೇಶದಲ್ಲಿ ಒಟ್ಟು 9100 ಮಂದಿ ಈ ಚುನಾವಣೆಯಲ್ಲಿ ಮತದಾನ ಮಾಡಲಿದ್ದಾರೆ. ರಾಜ್ಯದಲ್ಲಿ ಸಹ 494 ಮಂದಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದ್ದು, 479 ಪಿಸಿಸಿ ಪ್ರತಿನಿಧಿಗಳು, 15 ಶಾಸಕಾಂಗ ಪಕ್ಷದ ಸದಸ್ಯರು ಮತದಾನ ಮಾಡಲಿದ್ದಾರೆ.
![ಎಐಸಿಸಿ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ನಾಯಕ ಮಲ್ಲಿಕಾರ್ಜುನ ಖರ್ಗೆ](https://etvbharatimages.akamaized.net/etvbharat/prod-images/kn-bng-01-mallikarjun-kharge-pc-script-7208077_16102022153150_1610f_1665914510_324.jpg)
ಮತದಾನಕ್ಕೆ ಸಿದ್ಧತೆ: ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮತದಾನಕ್ಕೆ ಅಗತ್ಯ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ರಾಜ್ಯಕ್ಕೆ ಕೆಪಿಸಿಸಿ ಕಚೇರಿ ಮಾತ್ರವೇ ಏಕೈಕ ಮತಘಟ್ಟೆಯಾಗಿರಲಿದೆ. ಇಲ್ಲಿಯೇ ಆಗಮಿಸಿ ಸಿಎಲ್ಪಿ ಸದಸ್ಯರು ಹಾಗೂ ಪಿಸಿಸಿ ಪ್ರತಿನಿಧಿಗಳು ಆಗಮಿಸಿ ಮತ ಚಲಾಯಿಸಬೇಕಿದೆ. ರಾಜ್ಯದೆಲ್ಲೆಡೆಯಿಂದ ಮತದಾರರು ನಾಳೆ ಆಗಮಿಸಿ ಮತ ಚಲಾವಣೆ ಮಾಡಲಿದ್ದಾರೆ.
ವಿಶೇಷ ಮತಗಟ್ಟೆ: ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ನಡೆಸುತ್ತಿರುವ ಸಂದರ್ಭದಲ್ಲೇ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ಮತದಾನ ಹಿನ್ನೆಲೆ ಯಾತ್ರೆ ಮೊಟಕುಗೊಳಿಸಲು ಸಾಧ್ಯವಿಲ್ಲ. ಹೀಗಾಗಿ ಪಕ್ಷದ ವರಿಷ್ಠರು ರಾಹುಲ್ ಗಾಂಧಿ ಹಾಗೂ ಅವರೊಂದಿಗೆ ಯಾತ್ರೆಯಲ್ಲಿ ಭಾಗಿಯಾಗಿರುವ ಒಟ್ಟು 40 ಸದಸ್ಯರಿಗಾಗಿ ಪ್ರತ್ಯೇಕ ಹಾಗೂ ವಿಶೇಷ ಮತಗಟ್ಟೆ ಸ್ಥಾಪಿಸಿದೆ. 17ರಂದು ನಡೆಯುವ ಎಐಸಿಸಿ ಚುನಾವಣೆಯಲ್ಲಿ ರಾಹುಲ್ ಗಾಂಧಿ ಹಾಗೂ ಅವರ ಜತೆಗಿರುವ ರಾಷ್ಟ್ರೀಯ ನಾಯಕರು ಬಳ್ಳಾರಿಯ ಸಂಗನಕಲ್ಲು ಕ್ಯಾಂಪ್ ನಲ್ಲಿ ಮತ ಚಲಾವಣೆ ಮಾಡಲಿದ್ದಾರೆ.
ಸದ್ಯ ರಾಜ್ಯದ ಸಾಕಷ್ಟು ನಾಯಕರು ರಾಹುಲ್ ಗಾಂಧಿ ಜತೆ ಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. ಆದರೆ ಅವರಿಗೆ ಈ ಕ್ಯಾಂಪ್ನಲ್ಲಿ ಮತ ಚಲಾಯಿಸುವ ಅವಕಾಶ ಇಲ್ಲ. ಹೀಗಾಗಿ ಎಲ್ಲರೂ ಇಂದೇ ಮಹಾನಗರಕ್ಕೆ ವಾಪಸಾಗುತ್ತಿದ್ದು, ನಾಳಿನ ಮತದಾನದಲ್ಲಿ ಭಾಗಿಯಾಗಲಿದ್ದಾರೆ. ರಾಜ್ಯದಿಂದ ಮತ ಚಲಾಯಿಸುವ ಸದಸ್ಯರು ಕೆಪಿಸಿಸಿ ಕಚೇರಿಯಲ್ಲಿಯೇ ತಮ್ಮ ಹಕ್ಕು ಚಲಾಯಿಸಬೇಕಿದೆ.
ಬೆಂಗಳೂರಿನಲ್ಲಿ ಖರ್ಗೆ ಮತ ಚಲಾವಣೆ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇಂದು ಬೆಳಗ್ಗೆಯೇ ಬೆಂಗಳೂರಿಗೆ ಆಗಮಿಸಿದ್ದಾರೆ. ರಾಜ್ಯದ ಪ್ರತಿನಿಧಿಯಾಗಿರುವ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಸಹ ನಾಳೆ ಬೆಂಗಳೂರಲ್ಲೇ ಮತ ಚಲಾಯಿಸಲಿದ್ದಾರೆ. ವಿಧಾನಸಭೆ ಹಾಗೂ ವಿಧಾನ ಪರಿಷತ್ ನಾಯಕರೂ ಸೇರಿದಂತೆ ಮತ ಚಲಾಯಿಸುವ ಎಲ್ಲಾ ನಾಯಕರು ಇಂದು ನಗರಕ್ಕೆ ವಾಪಸಾಗಲಿದ್ದಾರೆ ಎಂಬ ಮಾಹಿತಿ ಇದೆ.
ಚುನಾವಣೆ ಪ್ರಕ್ರಿಯೆ: ಅಧಿಸೂಚನೆ ಪ್ರಕಾರ, ಸೆಪ್ಟೆಂಬರ್ 24 ರಿಂದ 30ರವರೆಗೂ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆದಿತ್ತು. ಅಕ್ಟೋಬರ್ 1 ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಅಕ್ಟೋಬರ್ 8 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಒಂದು ವೇಳೆ ಒಬ್ಬರಿಗಿಂತ ಹೆಚ್ಚಿನ ವ್ಯಕ್ತಿಗಳು ನಾಮಪತ್ರ ಸಲ್ಲಿಸಿದ್ದಲ್ಲಿ ಅಕ್ಟೋಬರ್ 17 ರಂದು ಚುನಾವಣೆ ನಡೆಯಲಿದೆ. ಅಕ್ಟೋಬರ್ 19 ರಂದು ಮತಗಳ ಎಣಿಕೆ ನಡೆಯಲಿದ್ದು, ಅಂದೇ ಫಲಿತಾಂಶ ಪ್ರಕಟವಾಗಲಿದೆ.
ಎರಡು ದಶಕದ ಬಳಿಕ ಚುನಾವಣೆ: ಕಾಂಗ್ರೆಸ್ ಪಕ್ಷವು 2000ನೇ ಸಾಲಿನ ನವೆಂಬರ್ ತಿಂಗಳಿನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕೊನೆಯ ಬಾರಿ ಸ್ಪರ್ಧೆ ನಡೆಸಿದೆ. ಜಿತೇಂದ್ರ ಪ್ರಸಾದ್ ಅವರು 2000 ರಲ್ಲಿ ಸೋನಿಯಾ ಗಾಂಧಿಯವರ ವಿರುದ್ಧ ಸೋತಿದ್ದರು. ಅದಕ್ಕೂ ಮೊದಲು ಸೀತಾರಾಮ್ ಕೇಸರಿ ಅವರು 1997ರಲ್ಲಿ ಶರದ್ ಪವಾರ್ ಮತ್ತು ರಾಜೇಶ್ ಪೈಲಟ್ ಅವರನ್ನು ಸೋಲಿಸಿದ್ದರು.
ಇದನ್ನೂ ಓದಿ: ನಾಳೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ: ಸೋನಿಯಾ, ರಾಹುಲ್ ಗಾಂಧಿ ಮತ ಚಲಾವಣೆ ಎಲ್ಲಿ?
2017 ಮತ್ತು 2019 ರ ನಡುವೆ ಎರಡು ವರ್ಷಗಳಲ್ಲಿ ರಾಹುಲ್ ಗಾಂಧಿ ಅಧ್ಯಕ್ಷ ಸ್ಥಾನದಲ್ಲಿದ್ದುದನ್ನು ಹೊರತುಪಡಿಸಿ 1998ರಿಂದ ಸೋನಿಯಾ ಗಾಂಧಿಯೇ ಪಕ್ಷದ ಚುಕ್ಕಾಣಿ ಹಿಡಿದಿದ್ದಾರೆ. ಇದೀಗ 22 ವರ್ಷಗಳ ಬಳಿಕ ಚುನಾವಣೆ ನಡೆಯುತ್ತಿದ್ದು, ಮಲ್ಲಿಕಾರ್ಜುನ ಖರ್ಗೆ ಹಾಗೂ ಶಶಿ ತರೂರ್ ಗೆಲುವಿಗಾಗಿ ಪೈಪೋಟಿ ನಡೆಸಿದ್ದಾರೆ.