ಬೆಂಗಳೂರು: ಹೋಲ್‌ಸೇಲ್‌ನಲ್ಲಿ ತೆಂಗಿನಕಾಯಿ ಮಾರಾಟ ಮಾಡುವುದಾಗಿ ನಂಬಿಸಿ ಮಹಿಳೆಯಿಂದ ಮುಂಗಡವಾಗಿ ಆನ್ಲೈನ್ ಮುಖಾಂತರ ₹ 45 ಸಾವಿರ ಪಡೆದು ವಂಚಿಸಿರುವ ಘಟನೆ ಬೆಳಕಿಗೆ ಬಂದಿದ್ದು, ಈ ಸಂಬಂಧ ವೈಟ್ಫೀಲ್ಡ್ ಸಿಇಎನ್ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಮಾನಪುರದ ಎಚ್‌ಎಎಲ್ ಓಲ್ಡ್ ಟೌನ್‌ಶಿಪ್‌ನ ಮಹಿಳೆ ವಂಚನೆಗೆ ಒಳಗಾಗಿದ್ದು, ಆಕೆ ನೀಡಿದ ದೂರಿನ ಮೇರೆಗೆ ಮಲ್ಲಿಕಾರ್ಜುನ್ ಮತ್ತು ಮಹೇಶ್ ಎಂಬುವರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ತಮ್ಮ ಅಂಗಡಿಗೆ ತೆಂಗಿನ ಕಾಯಿಗಳು ಬೇಕಾಗಿತ್ತು. ಹೀಗಾಗಿ, ಅಂಗಡಿಗೆ ತೆಂಗಿನ ಕಾಯಿಗಳನ್ನು ತಂದು ಹಾಕುವಂತೆ ವ್ಯಾಪಾರಿಗಳನ್ನು ಮಹಿಳೆ ಹುಡುಕುತ್ತಿದ್ದರು. ಗೂಗಲ್‌ನಲ್ಲಿ ಈ ಬಗ್ಗೆ ಮಾಹಿತಿ ಹುಡುಕಿದಾಗ ಮೈಸೂರು ಆರ್‌ಎಂಸಿ ಯಾರ್ಡ್‌ನ ಮಲ್ಲಿಕಾರ್ಜುನ್ ಎಂಬಾತನ ಮೊಬೈಲ್ ನಂಬರ್ ದೊರಕಿದೆ. ಮಲ್ಲಿಕಾರ್ಜುನ್‌ಗೆ ಕರೆ ಮಾಡಿದ ಮಹಿಳೆ ತೆಂಗಿನಕಾಯಿ ಆರ್ಡರ್ ಮಾಡಿದ್ದಾರೆ. ಆದರೆ, ಮುಂಗಡವಾಗಿ ಹಣ ಪಾವತಿಸಿದರೆ ಮಾತ್ರ ತೆಂಗಿನಕಾಯಿ ಕಳುಹಿಸುವುದಾಗಿ ಮಲ್ಲಿಕಾರ್ಜುನ್ ತಿಳಿಸಿದ್ದಾನೆ.
ಇದನ್ನು ನಂಬಿದ ಮಹಿಳೆ ಗೂಗಲ್ ಪೇ ಮೂಲಕ ಆತ ಕೊಟ್ಟ ಬ್ಯಾಂಕ್ ಖಾತೆಗೆ 45 ಸಾವಿರ ರೂ. ವರ್ಗಾವಣೆ ಮಾಡಿದ್ದಾರೆ. ಹಣ ಪಡೆದ ಆರೋಪಿ, ಬಳಿಕ ಮಹಿಳೆಯ ವಿಳಾಸ ಪಡೆದುಕೊಂಡಿದ್ದಾನೆ. ಹಲವು ದಿನವಾದರೂ ತೆಂಗಿನ ಕಾಯಿ ಕಳುಹಿಸರಲಿಲ್ಲ. ಕೊನೆಗೆ ಅಂಗಡಿ ವಿಳಾಸಕ್ಕೆ ಹೋಗಿ ನೋಡಿದಾಗ ಅಂಥ ವ್ಯಕ್ತಿ ಯಾರೂ ಇಲ್ಲವೆಂದು ಗೊತ್ತಾಗಿದೆ. ಮತ್ತೆ ಕರೆ ಮಾಡಿದಾಗ ಮೈಸೂರು ಆರ್‌ಎಂಸಿ ಯಾರ್ಡ್ ಅಲ್ಲ. ಪಾಂಡವಪುರದಲ್ಲಿ ಅಂಗಡಿ ಇರುವುದಾಗಿ ಆತ ಹೇಳಿದ್ದಾನೆ. ಅಲ್ಲಿಗೆ ಹೋದಾಗ ಅಲ್ಲಿಯೂ ಆರೋಪಿಯ ಭೇಟಿ ಸಾಧ್ಯವಾಗಿಲ್ಲ. ತಾನು ವಂಚನೆಗೊಳಗಾಗಿರುವುದನ್ನು ಅರಿತ ಆ ಮಹಿಳೆ ಠಾಣೆಗೆ ದೂರು ನೀಡಿದ್ದಾರೆ.
ಈ ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಪತ್ತೆಗೆ ಜಾಲ ಬೀಸಿದ್ದಾರೆ.