ಬೆಂಗಳೂರು: ಕೋವಿಡ್ ಲಸಿಕೆ ಪಡೆಯಲು ಜನ ಬೆಂಗಳೂರಿನ ಹಲವೆಡೆ ಸರತಿ ಸಾಲಿನಲ್ಲಿ ನಿಂತಿದ್ದಾರೆ. 40 ಸಾವಿರ ಲಸಿಕೆ ಡೋಸ್ಗಳು ಬಿಬಿಎಂಪಿ ವ್ಯಾಪ್ತಿಯ ದಾಸಪ್ಪ ಆಸ್ಪತ್ರೆಗೆ ಬಂದಿವೆ. ಇಲ್ಲಿಂದ ನಗರದ ವಿವಿಧ ಆರೋಗ್ಯ ಕೇಂದ್ರ, ಆಸ್ಪತ್ರೆಗಳಿಗೆ ಡೋಸ್ಗಳು ರವಾನೆಯಾಗಲಿವೆ.
ಅಧಿಕಾರಿಯೊಬ್ಬರ ಪ್ರಕಾರ ಇಂದು ಹಾಗೂ ನಾಳೆ ಮಧ್ಯಾಹ್ನದವರೆಗೂ ನಗರದಾದ್ಯಂತ ಲಸಿಕೆ ಕೊಡಲು ಸಾಧ್ಯವಾಗುವಷ್ಟು ಡೋಸ್ಗಳು ಬಂದಿವೆ. ಒಟ್ಟು ಪಾಲಿಕೆ ವ್ಯಾಪ್ತಿಯ 141 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವ್ಯಾಕ್ಸಿನ್ ಪೂರೈಕೆಯಾಗಲಿದ್ದು, ಮಧ್ಯಾಹ್ನದ ಹೊತ್ತಿಗೆ ನಗರ ವ್ಯಾಪ್ತಿಯ ಬಹುತೇಕ ಕಡೆ ವ್ಯಾಕ್ಸಿನ್ ದೊರೆಯಲಿದೆ. ಪ್ರತಿ ಲಸಿಕೆ ಸೆಂಟರ್ನ ಬೇಡಿಕೆ ಆಧರಿಸಿ ಕನಿಷ್ಠ 200 ವ್ಯಾಕ್ಸಿನ್ ತಲುಪಿಸಲು ತೀರ್ಮಾನ ಕೈಗೊಳ್ಳಲಾಗಿದ್ದು, ಸದ್ಯಕ್ಕಂತೂ ಆತಂಕ ಬೇಡ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವ್ಯಾಕ್ಸಿನ್ ತಡವಾಗಿಯಾದರೂ ಲಭ್ಯವಾಗಲಿದ್ದು, 45 ವರ್ಷಕ್ಕಿಂತ ಮೇಲ್ಪಟ್ಟ ಸೆಕೆಂಡ್ ಡೋಸ್ಗೆ ಮಾತ್ರ ಸೀಮಿತವಾಗಲಿದೆ ಎಂದು ತಿಳಿಸಿದ್ದಾರೆ.
50 ಜನಕ್ಕೆ ಕೊಡುವಷ್ಟು ವ್ಯಾಕ್ಸಿನ್ ಈಗಾಗಲೇ ಇದ್ದು, 200 ಜನರು ಕ್ಯೂ ನಿಂತಿದ್ದಾರೆ, ವ್ಯಾಕ್ಸಿನ್ ಕೊರತೆ ನೀಗಿಸಲು 8 ವಲಯಗಳಿಗೆ ವ್ಯಾಕ್ಸಿನ್ ರವಾನಿಸಲಾಗುತ್ತಿದೆ. ಇಂದು ಮಧ್ಯಾಹ್ನದ ನಂತರ ಹಾಗೂ ನಾಳೆ ವ್ಯಾಕ್ಸಿನ್ ಕೊರತೆ ಇರುವುದಿಲ್ಲ. ಸದ್ಯಕ್ಕೆ ವ್ಯಾಕ್ಸಿನ್ ಪಡೆಯಲು ಆತುರ ಬೇಡ, ಪ್ರತಿ ಸೆಂಟರ್ಗೂ ಕನಿಷ್ಠ 100, ಗರಿಷ್ಠ 300 ವ್ಯಾಕ್ಸಿನ್ ನೀಡಲಾಗುತ್ತಿದೆ ಎಂದು ದಾಸಪ್ಪ ಆಸ್ಪತ್ರೆಯ ಸ್ಟೋರೇಜ್ ಅಧಿಕಾರಿ ಮಂಜುಳ ಮಾಹಿತಿ ನೀಡಿದ್ದಾರೆ.