ಬೆಂಗಳೂರು: ವಿಧಾನಸೌಧ, ವಿಕಾಸಸೌಧ ತಲುಪಿದ್ದ ಕೊರೊನಾ ಇದೀಗ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾಗೂ ಕಾಲಿಟ್ಟಿದೆ. ನಾಲ್ವರು ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಕಂಡುಬಂದಿದೆ. ಇದೇ ಕಾರಣಕ್ಕಾಗಿ ಇಂದು ಮಧ್ಯಾಹ್ನ ನಿಗದಿಯಾಗಿದ್ದ ಸಭೆಯನ್ನು ವಿಧಾನಸೌಧಕ್ಕೆ ಸ್ಥಳಾಂತರ ಮಾಡಲಾಯಿತು ಎನ್ನಲಾಗ್ತಿದೆ.
ಸೋಮವಾರ ಹಾಗೂ ಮಂಗಳವಾರ ಎಲ್ಲಾ ಸಿಬ್ಬಂದಿಗೂ ಕೊರೊನಾ ತಪಾಸಣೆ ನಡೆಸಲಾಗಿತ್ತು. ಈ ಪೈಕಿ ನಾಲ್ವರಲ್ಲಿ ಸೋಂಕು ದೃಢಪಟ್ಟಿದೆ. ಸಂಜೆ ಹೆಲ್ತ್ ಬುಲೆಟಿನ್ನಲ್ಲಿ ಅಧಿಕೃತವಾಗಿ ಪ್ರಕಟವಾಗಲಿದೆ ಎಂದು ತಿಳಿದುಬಂದಿದೆ. ಸಿಎಂ ಗೃಹ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಓರ್ವ ಎಎಸ್ಐ, ಮಹಿಳಾ ಕಾನ್ಸ್ಟೇಬಲ್, ಅಗ್ನಿಶಾಮಕದಳ ಸಿಬ್ಬಂದಿ ಹಾಗೂ ಸಿಎಂ ನಿವಾಸದಲ್ಲಿ ಎಲೆಕ್ಟ್ರಿಷಿಯನ್ ಕೆಲಸ ಮಾಡುತ್ತಿದ್ದ ಸಿಬ್ಬಂದಿಗೂ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಹೇಳಲಾಗ್ತಿದೆ.
ಕಳೆದ ವಾರ ಮಹಿಳಾ ಕಾನ್ಸ್ಟೇಬಲ್ ಒಬ್ಬರ ಪತಿಗೆ ಪಾಸಿಟಿವ್ ಬಂದಿತ್ತು. ಆದರೆ ಆ ಕಾನ್ಸ್ಟೇಬಲ್ಗೆ ಸೋಂಕು ತಗುಲಿರಲಿಲ್ಲ. ಇದರಿಂದ ಗೃಹ ಕಚೇರಿ ಸಿಬ್ಬಂದಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಆದರೆ, ಇದೀಗ ನಾಲ್ಕು ಜನರಿಗೆ ಪಾಸಿಟಿವ್ ಬಂದಿದ್ದು, ಸಿಎಂ ಗೃಹ ಕಚೇರಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ಇಂದಿನ ಸಭೆಯನ್ನು ವಿಧಾನಸೌಧಕ್ಕೆ ಸ್ಥಳಾಂತರ ಮಾಡಲಾಗಿದೆ. ಸಿಎಂ ಗೃಹ ಕಚೇರಿಗೆ ಪ್ರವೇಶ ನಿರ್ಬಂಧಿಸಲಾಗಿದ್ದು, ಸಂಪೂರ್ಣ ಸ್ಯಾನಿಟೈಸ್ ಮಾಡಲಾಗಿದೆ.