ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸೋಂಕು ಹೆಚ್ಚಾಗುತ್ತಿದ್ದು ಆರೋಗ್ಯ ಇಲಾಖೆ ನಡೆಸಿದ ಜಿನೋಮ್ ಸೀಕ್ವೆನ್ಸಿಂಗ್ನಲ್ಲಿ ಒಮಿಕ್ರಾನ್ ವೈರಾಣು ಉಪತಳಿ JN.1 ಪತ್ತೆಯಾಗಿದೆ. ಸುಮಾರು 34 ಕೋವಿಡ್ ಸೋಂಕಿತರಿಗೆ JN.1 ಪಾಸಿಟಿವ್ ಬಂದಿದೆ. ಹಾಗಾಗಿ ಹೆಚ್ಚಿನ ಮುಂಜಾಗ್ರತಾ ಕ್ರಮ ವಹಿಸುವ ಕುರಿತು ನಾಳೆ ಕೋವಿಡ್ ನಿರ್ವಹಣೆಗೆ ರಚಿಸಿರುವ ಸಂಪುಟ ಉಪ ಸಮಿತಿ ಸಭೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, JN.1 ವೈರಾಣು ರಾಜ್ಯದಲ್ಲಿ ಇರಬಹುದು ಎಂದು ಮೊದಲೇ ನಿರೀಕ್ಷಿಸಲಾಗಿತ್ತು. ಆದರೆ ಅದು ಜಿನೋಮ್ ಸೀಕ್ವೆನ್ಸಿಂಗ್ನಲ್ಲೇ ನಮಗೆ ಸ್ಪಷ್ಟವಾಗಿ ಗೊತ್ತಾಗೋದು. ಹೀಗಾಗಿ ಜಿನೋಮ್ ಸೀಕ್ವೆನ್ಸಿಂಗ್ಗೆ ಕಳುಹಿಸಿದ್ದೆವು. ಇದೀಗ ವರದಿ ಬಂದಿದೆ. ರಾಜ್ಯದಲ್ಲಿ 34 JN.1 ಪ್ರಕರಣಗಳು ಪತ್ತೆಯಾಗಿವೆ. ಆದರೆ ಜನರು ಕೋವಿಡ್ ಸಂಬಂಧ ಆತಂಕಪಡುವ ಅಗತ್ಯವಿಲ್ಲ. ಈ ಉಪತಳಿ ಅಪಾಯಕಾರಿ ಅಲ್ಲ ಎಂಬುದನ್ನು ತಜ್ಞರು ಈಗಾಗಲೇ ಹೇಳಿದ್ದಾರೆ. ಸೋಂಕು ಹೆಚ್ಚಿನ ಸಂಖ್ಯೆಯಲ್ಲಿ ಹರಡದಂತೆ ಎಚ್ಚರಿಕೆ ವಹಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಸ್ಬಲ್ಪ ಎಚ್ಚರಿಕೆಯಿಂದಿರಬೇಕು. ಆರೋಗ್ಯ ಇಲಾಖೆಯಿಂದಲೂ ಕೂಡ ಈಗಾಗಲೇ ಎಲ್ಲ ರೀತಿಯ ತಯಾರಿಗಳನ್ನು ಮಾಡಿಕೊಳ್ಳಲಾಗಿದೆ. ಕೋವಿಡ್ ಎದುರಿಸಲು ಸನ್ನದ್ಧರಾಗುವಂತೆ ಎರಡು ಮೂರು ಬಾರಿ ಸಭೆ ನಡೆಸಿ ಆಸ್ಪತ್ರೆಗಳಿಗೆ ಹಾಗೂ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಗಾಬರಿ ಅಗತ್ಯವಿಲ್ಲ: JN.1 ಪ್ರಕರಣಗಳ ಸಂಬಂಧ ಯಾರೂ ಗಾಬರಿಪಡುವ ಅಗತ್ಯವಿಲ್ಲ. ಬಹುತೇಕ JN.1 ಪ್ರಕರಣಗಳು ಬೆಂಗಳೂರಿನಲ್ಲೇ ಪತ್ತೆಯಾಗಿವೆ. ಬೆಂಗಳೂರಿನಲ್ಲಿ- 20, ಮೈಸೂರು- 4, ಮಂಡ್ಯ- 3, ರಾಮನಗರದಲ್ಲಿ - 1 ಒಮಿಕ್ರಾನ್ ಉಪತಳಿ ಪತ್ತೆಯಾಗಿದ್ದು, ಇಲ್ಲಿಯವರೆಗೆ ಕೋವಿಡ್ ಬಂದವರಲ್ಲಿ ಮೂವರು ಸಾವನ್ನಪ್ಪಿರುವುದು ವರದಿಯಾಗಿದೆ. ಸಾವನ್ನಪ್ಪಿದವರಲ್ಲೂ JN.1 ಪಾಸಿಟಿವ್ ಇರುವುದು ವರದಿಯಲ್ಲಿ ಬೆಳಕಿಗೆ ಬಂದಿದೆ ಎಂದು ಸಚಿವ ಗುಂಡೂರಾವ್ ಸ್ಪಷ್ಟಪಡಿಸಿದರು.
ಸಚಿವ ಸಂಪುಟ ಉಪ ಸಮಿತಿ ಸಭೆ: ಕೋವಿಡ್ ಸಂಬಂಧ ರಚಿಸಲಾಗಿರುವ ಕ್ಯಾಬಿನೆಟ್ ಉಪಮಿತಿ ಸಭೆ ನಾಳೆ ನಡೆಯಲಿದೆ. ಈ ಸಭೆಯಲ್ಲಿ ಜೆಎನ್ 1 ಪ್ರಕರಣಗಳೂ ಸೇರಿದಂತೆ, ಕೋವಿಡ್ ನಿಯಂತ್ರಣ ಹಾಗೂ ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಲಾಗುವುದು. ಸದ್ಯಕ್ಕೆ ಯಾವುದೇ ಹೊಸ ನಿರ್ಬಂಧವಿಲ್ಲ. ಈಗಾಗಲೇ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿಯನ್ನು ಹೊರಡಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲರೂ ಮಾಸ್ಕ್ ಧರಿಸುವುದು ಉತ್ತಮ ಎಂಬುದು ನಮ್ಮ ಸಲಹೆ. 60 ವರ್ಷ ಮೇಲ್ಪಟ್ಟವರು, ಇತರ ಕಾಯಿಲೆ ಹೊಂದಿದವರಿಗೆ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ ಎಂದರು.
ನಿರ್ಬಂಧ ಇಲ್ಲ: JN.1 ವಿಚಾರದಲ್ಲಿ ಕೇಂದ್ರ ಸರ್ಕಾರದಿಂದ ಯಾವುದೇ ಮಾರ್ಗಸೂಚಿ ಇಲ್ಲ. ಹೊಸ ವರ್ಷಾಚರಣೆಗೆ ನಿರ್ಬಂಧ ಹೇರುವ ಬಗ್ಗೆ ಯಾವುದೇ ಚಿಂತನೆಗಳಿಲ್ಲ. ಸಂಪುಟ ಉಪ ಸಮಿತಿ ಸಭೆಯಲ್ಲಿ ತಜ್ಞರೊಂದಿಗೂ ಚರ್ಚಿಸಿ ಮುಂದಿನ ಕ್ರಮಗಳ ಬಗ್ಗೆ ತೀರ್ಮಾನಿಸುತ್ತೇವೆ. ಜನ ಸೇರಬಾರದು, ಕಾರ್ಯಕ್ರಮ ಮಾಡಬಾರದು ಎಂದು ನಿಯಮ ಜಾರಿ ಮಾಡುತ್ತಿಲ್ಲ. ಆ ಮಟ್ಟಕ್ಕೆ ಪ್ಯಾನಿಕ್ ಆಗುವ ಅಗತ್ಯವಿಲ್ಲ. ಪಾಸಿಟಿವ್ ಬಂದವರು ಐಸೊಲೇಷನ್ನಲ್ಲಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಇದನ್ನೂ ಓದಿ: ತಜ್ಞರ ತಂಡ ಸೂಚಿಸಿದರೆ ಮಾತ್ರ ವ್ಯಾಕ್ಸಿನೇಷನ್: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್