ದೇವನಹಳ್ಳಿ: ಸಾರಿಗೆ ಸಿಬ್ಬಂದಿ ವೇತನ ವಿಳಂಬ ತಡೆಯುವ ಸಲುವಾಗಿ ಹಂತ ಹಂತವಾಗಿ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈಗಾಗಲೇ ಸಾರಿಗೆ ನೌಕರರ ವೇತನಕ್ಕಾಗಿ 3,000 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ವತಿಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ನಿರ್ಮಿಸಿರುವ ನೂತನ ಬಸ್ ಘಟಕವನ್ನು ಇಂದು ಉದ್ಘಾಟಿಸಿ ಮಾತನಾಡಿದ ಅವರು, ಸಾರಿಗೆ ನೌಕರರ ವೇತನಕ್ಕಾಗಿ ರೂ.3000 ಕೋಟಿಗಳನ್ನು ಬಿಡುಗಡೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸಾರಿಗೆ ಸಿಬ್ಬಂದಿ ವೇತನ ವಿಳಂಬವಾಗದಂತೆ ತಡೆಯಲು ಸರ್ಕಾರದ ಹಂತದಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಸಾರಿಗೆ ನೌಕರರು ಬೇಡಿಕೆಗಳಿದ್ದಲ್ಲಿ, ಮುಷ್ಕರ ಮಾಡದೇ ಸರ್ಕಾರದೊಂದಿಗೆ ಚರ್ಚಿಸಿ ಸಮಸ್ಯೆಗಳನ್ನು ಇತ್ಯರ್ಥಪಡಿಸಿಕೊಳ್ಳಬೇಕು ಎಷ್ಟೇ ಸಮಸ್ಯೆಗಳಿದ್ದರೂ, ಒತ್ತಡವಿದ್ದರೂ ನಿಗಮಗಳ ಬಸ್ ಚಾಲಕರು ಯಾವುದೇ ಅಪಘಾತ ಮಾಡದೇ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ಚಾಲಕರನ್ನು ಹಾಡಿ ಹೊಗಳಿದ್ರು.
ಇದನ್ನೂ ಓದಿ: ಉಕ್ರೇನ್ನಲ್ಲಿ ಹತನಾಗಿದ್ದ ನವೀನ್ : ಮೆಡಿಕಲ್ ಕಾಲೇಜಿಗೆ ಪಾರ್ಥೀವ ಶರೀರ ನೀಡಲು ಮುಂದಾದ ಕುಟುಂಬ
ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಹಲವು ಬಸ್‌ಗಳು ನಿಂತ ಕಾರಣ ಮುಖ್ಯಮಂತ್ರಿಗಳು 1,000 ಬಸ್‌ಗಳ ಖರೀದಿಗೆ ಘೋಷಣೆ ಮಾಡಿದ್ದು, ಮೊದಲ ಹಂತದಲ್ಲಿ 643 ನಂತರ 170 ಹೊಸ ಡೀಸೆಲ್ ಬಸ್‌ಗಳನ್ನು ಖರೀದಿಸಲಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ರೂ. 50 ಕೋಟಿ ಅನುದಾನದಲ್ಲಿ, ರೂ.45 ಕೋಟಿಯ 90 ಬಸ್ ಎಲೆಕ್ಟ್ರಿಕ್ ಬಸ್ ಖರೀದಿಸಲಾಗಿದೆ ಹಾಗೂ ಉಳಿದ ರೂ.5 ಕೋಟಿ ಅನುದಾನದಲ್ಲಿ ಚಾರ್ಜಿಂಗ್ ಸ್ಟೇಷನ್‌ಗಳ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ. ಪರಿಸರ ಉಳಿಸಲು ಎಲೆಕ್ಟ್ರಿಕ್ ಬಸ್‌ಗಳು ಸಹಕಾರಿಯಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಎಲೆಕ್ಟ್ರಿಕ್ ಬಸ್‌ಗಳನ್ನು ಖರೀದಿಸಲಾಗುವುದು ಎಂದು ತಿಳಿಸಿದರು.
ಕಟ್ಟಡ ಕಾರ್ಮಿಕರಿಗೆ ಅನುಕೂಲವಾಗುವಂತೆ ಉಚಿತ ಪ್ರಯಾಣದ ಬಸ್ ಪಾಸ್ ನೀಡಲಾಗಿದೆ. ಸಾರಿಗೆ ಇಲಾಖೆಯಲ್ಲಿ ಹಲವು ಉತ್ತಮ ಬದಲಾವಣೆಗಳನ್ನು ತರಲು, ನಿಗಮಗಳನ್ನು ಲಾಭದಾಯಕವನ್ನಾಗಿಸಲು ಹಾಗೂ ಸಾರಿಗೆ ಸಿಬ್ಬಂದಿ ವೇತನ ಪರಿಷ್ಕರಣೆಗಾಗಿ ನಿವೃತ್ತ ಐಎಎಸ್ ಅಧಿಕಾರಿ ಶ್ರೀನಿವಾಸಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿ ನೇಮಿಸಲಾಗುವುದು ಹಾಗೇ ಸಾರಿಗೆ ಇಲಾಖೆಯು ಸಾರ್ವಜನಿಕರ ಸೇವೆಗೆ ಸದಾ ಸಿದ್ಧವಾಗಿರುತ್ತದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಪೌರಾಡಳಿತ, ಸಣ್ಣ ಕೈಗಾರಿಕೆಗಳು, ಸಾರ್ವಜನಿಕ ಉದ್ಯಮಗಳ ಸಚಿವ ಎಂಟಿಬಿ ನಾಗರಾಜ್, ಶಾಸಕ ನಿಸರ್ಗ ನಾರಾಯಣ ಸ್ವಾಮಿ, ಬಿಎಂಟಿಸಿ ಅಧ್ಯಕ್ಷರಾದ ಎನ್.ಎಸ್.ನಂದೀಶ್‌ರೆಡ್ಡಿ ಭಾಗವಹಿಸಿದರು.