ಬೆಂಗಳೂರು: ಈಜಲು ಹೋಗಿ ನೀರಿನಲ್ಲಿ ಮುಳುಗಿ ಮೂವರು ನೀರು ಪಾಲಾಗಿರುವ ದುರ್ಘಟನೆ ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡ ಗುಬ್ಬಿ ಕೆರೆಯಲ್ಲಿ ನಡೆದಿದೆ. ಸಾರಾಯಿಪಾಳ್ಯದಿಂದ ಇಂದು ಮಧ್ಯಾಹ್ನ ದೊಡ್ಡ ಗುಬ್ಬಿ ಕೆರೆಗೆ ಆಗಮಿಸಿದ್ದ ಐದು ಮಂದಿ ಯುವಕರಲ್ಲಿ ಇಮ್ರಾನ್ ಪಾಷಾ, ಮುಬಾರಕ್, ಶಾಹೀದ್ ಎಂಬುವರು ನೀರಿನಲ್ಲಿ ಮುಳುಗಿದ್ದಾರೆ. ಇವರ ಮೃತದೇಹ ಪತ್ತೆಗಾಗಿ ಸ್ಥಳಕ್ಕೆ ದೌಡಾಯಿಸಿರುವ ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರೂ ಶವ ಪತ್ತೆಯಾಗಿಲ್ಲ. ಕತ್ತಲಾಗಿದ್ದರಿಂದ ನಾಳೆ ಪತ್ತೆಕಾರ್ಯ ಮುಂದುವರೆಸಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾರಾಯಿಪಾಳ್ಯದಿಂದ ಇಂದು ಮಧ್ಯಾಹ್ನ ದೊಡ್ಡಗುಬ್ಬಿ ಕೆರೆಗೆ ಈಜಲು ಬಂದಿದ್ದರು. ಮೃತರಾದ ಮೂವರು ಸೇರಿದರೆ ಇನ್ನಿಬ್ಬರಾದ ಅಬ್ದುಲ್ ರೆಹಮಾನ್ ಹಾಗೂ ಶಾಹೀಲ್ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ಇಮ್ರಾನ್ ಕಳೆದ ವಾರ ಇದೇ ಕೆರೆಯಲ್ಲಿ ಈಜಾಡಲು ಬಂದಿದ್ದ. ತಾನು ಈಜಾಡುತ್ತಿರುವ ಬಗ್ಗೆ ಇನ್‌ಸ್ಟ್ರಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದ. ಈ ಬಗ್ಗೆ ಸ್ನೇಹಿತರಿಗೂ ಹೇಳಿದ್ದ.
ಗೆಳೆಯರನ್ನೆಲ್ಲಾ ಒಗ್ಗೂಡಿಸಿಕೊಂಡು ಬಾಡಿಗೆ ಆಟೊ ಮಾಡಿ ಇಂದು ಕೆರೆ ಬಳಿ ಕರೆತಂದಿದ್ದ. ಮುಬಾರಕ್, ಶಾಹೀದ್ಗೆ ಈಜು ಬರದಿದ್ದರೂ ಇಮ್ರಾನ್ ಬಲವಂತವಾಗಿ ನೀರಿಗಿಳಿಯುವಂತೆ ಮಾಡಿದ್ದನಂತೆ. ನಂತರ ಈಜಾಡಲು ಸಾಧ್ಯವಾಗದೇ ನೀರಿನಲ್ಲಿ ಮುಳುಗಿದ್ದಾರೆ.
ದಡದಲ್ಲಿದ್ದ ಇಬ್ಬರು ಶಾಹೀಲ್ ಹಾಗೂ ಅಬ್ದುಲ್ ಪೋಷಕರಿಗೆ ಹಾಗೂ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ನೀರಿನಲ್ಲಿ ಮುಳುಗಿ ಕಾಣೆಯಾದವರ ಪತ್ತೆಗಾಗಿ ಶೋಧ ನಡೆಸುತ್ತಿದ್ದರೂ ಇದುವರೆಗೂ ಮೂವರ ಶವಗಳು ಪತ್ತೆಯಾಗಿಲ್ಲ. ಸದ್ಯ ಕಾರ್ಯಾಚರಣೆ ನಾಳೆಗೆ ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳೀಯ ನಿವಾಸಿ ಲಕ್ಷ್ಮೀ ನರಸಿಂಹ ಈ ಬಗ್ಗೆ ಪ್ರತಿಕ್ರಿಯಿಸಿದ್ದು ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಸಾರಾಯಿಪಾಳ್ಯದ ನಿವಾಸಿಗಳು ಐದು ಜನ ಈಜಾಡೋಕೆ ಅಂತಾ ಬಂದಿದ್ದಾರೆ. ಆಗ ಮೂವರು ಕೆರೆಯಲ್ಲಿ ಮುಳುಗಿದ್ದಾರೆ. ಉಳಿದ ಇಬ್ಬರು ಹೇಗೋ ಹೊರಗೆ ಬಂದಿದ್ದಾರೆ. ನಂತರ ಅವರು ಕೊತ್ತನೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಧ್ಯಾಹ್ನ 2 ಗಂಟೆಯಿಂದ ಹುಡುಕಾಟ ನಡೆಸಲಾಗಿದೆ. ಅಗ್ನಿಶಾಮಕ ಸಿಬ್ಬಂದಿ ಶೋಧ ನಡೆಸುತ್ತಿದ್ದರೂ ಮೂವರ ಮೃತದೇಹ ಸಿಕ್ಕಿಲ್ಲ. ಕತ್ತಲಾಗಿರುವ ಕಾರಣ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದು, ನಾಳೆ ಪತ್ತೆಕಾರ್ಯ ಮುಂದುವರೆಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಓದಿ: ಕಾಂಗ್ರೆಸ್ - ಬಿಜೆಪಿ ಅಭ್ಯರ್ಥಿ ನಡುವೆ ಬಹಿರಂಗ ಚರ್ಚೆಯಾಗಲಿ: ಗೋವಿಂದ್ ಕಾರಜೋಳ ಸವಾಲ್