ಬೆಂಗಳೂರು: ಸಾಂಕ್ರಾಮಿಕ ಕೊರೊನಾ ಸೋಂಕಿನ 2ನೇ ಅಲೆ ಇನ್ನೇನು ಕಡಿಮೆ ಆಯ್ತು ಎನ್ನುವಾಗಲೇ ಇದೀಗ 3ನೇ ಅಲೆ ಭೀತಿ ಶುರುವಾಗಿದೆ. 2ನೇ ಅಲೆಯ ಭೀಕರತೆಯಿಂದ ಪಾಠ ಕಲಿತಿರುವ ಆರೋಗ್ಯ ಇಲಾಖೆ, 3ನೇ ಅಲೆ ಬರುವ ಮುನ್ನವೇ ಇದೀಗ ತಯಾರಿ ನಡೆಸಿದೆ.
ಆಸ್ಪತ್ರೆಯಲ್ಲಿ ಮೂಲಸೌಕರ್ಯ ಏನೇ ಇದ್ದರೂ ಅದರ ನಿರ್ವಹಣೆಗೆ ವೈದ್ಯರು, ವೈದ್ಯಕೀಯ ಸಿಬ್ಬಂದಿ ಅಗತ್ಯವಾಗಿ ಬೇಕೇ ಬೇಕು. ಹೀಗಾಗಿ, ಕಳೆದ ಒಂದೂವರೆ ತಿಂಗಳಲ್ಲಿ 3500 ವೈದ್ಯರ ನೇಮಕಾತಿಯನ್ನ ಮಾಡಿಕೊಂಡಿದೆ ಅಂತ ಆರೋಗ್ಯ ಇಲಾಖೆಯ ಆಯುಕ್ತ ತ್ರಿಲೋಕ ಚಂದ್ರ ತಿಳಿಸಿದ್ದಾರೆ.
ಈಗಾಗಲೇ ಮೂರನೇ ಅಲೆಯ ಎಚ್ಚರಿಕೆ ನೀಡಿರುವ ತಜ್ಞರು, ಸರ್ಕಾರಕ್ಕೆ ಮಧ್ಯಂತರ ವರದಿಯನ್ನ ಸಲ್ಲಿಸಿದ್ದಾರೆ. ಆಗಸ್ಟ್ ಅಂತ್ಯಕ್ಕೆ ಮೂರನೇ ಅಲೆ ಕಾಣಿಸುತ್ತೆ ಅಂತ ಹೇಳಿರುವ ತಜ್ಞರ ಮಾತಿಗೂ ಮುನ್ನವೇ ಕೊರೊನಾ ಅಲೆ ಅಪ್ಪಳಿಸುವ ಸಾಧ್ಯತೆ ಇದೆ. ಯಾಕೆಂದರೆ ಕೇರಳ ಭಾಗದಲ್ಲಿ ಕೊರೊನಾ ಅಬ್ಬರ ಜೋರಾಗಿದ್ದು, ಗಡಿಭಾಗದ ಪ್ರದೇಶದಲ್ಲಿ ಸೋಂಕು ತೀವ್ರಗೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಇದನ್ನ ನಿರ್ಲಕ್ಷ್ಯಿಸದೇ ಸೋಂಕು ಹೆಚ್ಚಿರುವ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಮೂರನೇ ಅಲೆ ಬರುವ ಮುನ್ನ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡು ತಯಾರಿ ನಡೆಸಿದೆ
ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆಯಲ್ಲಿ ಎಷ್ಟು ಹಾಸಿಗೆ ವ್ಯವಸ್ಥೆ ಬೇಕು? ಆಕ್ಸಿಜನ್ ಸಮಸ್ಯೆ ಆಗದಂತೆ ಎಲ್ಲಿಲ್ಲಿ ಪ್ಲಾಂಟ್ ವ್ಯವಸ್ಥೆ ಮಾಡಬೇಕು? ಆಕ್ಸಿಜನ್ ಕಾನ್ಸಂಟ್ರೇಟರ್ ಗಳನ್ನ ಹೇಗೆ ಬಳಸಬೇಕು? ಸ್ಥಳೀಯವಾಗಿ ಹೇಗೆ ಆಕ್ಸಿಜನ್ ವ್ಯವಸ್ಥೆ ಮಾಡಿಕೊಳ್ಳಬೇಕು ಎಂಬುದರ ಕುರಿತು ತಯಾರಿ ನಡೆಸಿದೆ.
ಈಗಾಗಲೇ ಜಿಲ್ಲೆ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಐಸಿಯು ಬೆಡ್ ಹೆಚ್ಚಳ ಮಾಡಲಾಗ್ತಿದೆ. ಜಿಲ್ಲಾಸ್ಪತ್ರೆಗಳಲ್ಲಿ ಸದ್ಯ ಕನಿಷ್ಠ 25 ಐಸಿಯು ಬೆಡ್ಗಳಿದ್ದು, ಇದನ್ನ 50 ಬೆಡ್ ಗಳಿಗೆ ಏರಿಸಲಾಗ್ತಿದೆ. ಜಿಲ್ಲಾ ಆಸ್ಪತ್ರೆಗಳಲ್ಲಿ ಕನಿಷ್ಠ 20 ಮಕ್ಕಳ ಐಸಿಯು ಮಾಡಲಾಗ್ತಿದೆ. ನಿಯೋ ನೆಟಲ್ ವೆಂಟಿಲೇಟರ್ ಕೂಡ ಅಳವಡಿಕೆ ಮಾಡಲಾಗ್ತಿದೆ. ಜಿಲ್ಲಾ ಆಸ್ಪತ್ರೆಗಳಲ್ಲಿ ಸದ್ಯ 6 ಕೆ ಎಲ್ ಸಾಮರ್ಥ್ಯದ ಆಕ್ಸಿಜನ್ ಟ್ಯಾಂಕರ್ ಇದೆ.
ಹೀಗಾಗಿ 13 ಕೆ ಎಲ್ ಸಾಮರ್ಥ್ಯ ಹೊಂದುವಂತೆ ಟ್ಯಾಂಕರ್ ಅಳವಡಿಕೆ ಮಾಡಲಾಗ್ತಿದೆ. ಮೂರರಿಂದ ನಾಲ್ಕು ದಿನಗಳವರೆಗೆ ಆಗುವಷ್ಟು ಆಕ್ಸಿಜನ್ ಇರುವಂತೆ ವ್ಯವಸ್ಥೆ ಮಾಡಲಾಗ್ತಿದೆ. ಇದಲ್ಲದೇ 1000 LPM ಸಾಮರ್ಥ್ಯದ ಆಕ್ಸಿಜನ್ ಪ್ಲಾಂಟ್ ಕೂಡ ನಿರ್ಮಾಣ ಮಾಡಲಾಗ್ತಿದೆ.
ಸದ್ಯ, ಕರ್ನಾಟಕದಲ್ಲಿ 3000 ಮಕ್ಕಳ ವೈದ್ಯರಿದ್ದಾರೆ. ಪ್ರತಿ ಜಿಲ್ಲೆಯಲ್ಲಿ ಮಕ್ಕಳ ವೈದ್ಯರ ಮ್ಯಾಪಿಂಗ್ ಮಾಡಲಾಗ್ತಿದ್ದು ಸರ್ಕಾರಿ, ಖಾಸಗಿ ವೈದ್ಯರನ್ನು ಬಳಕೆ ಮಾಡಲು ಕ್ರಮ ವಹಿಸಲಾಗುತ್ತಿದೆ. ಒಂದೂವರೆ ತಿಂಗಳಲ್ಲಿ ಮೂರುವರೆ ಸಾವಿರ ವೈದ್ಯರ ನೇಮಕ ಮಾಡಲಾಗಿದೆ. ಇತರ ವೈದ್ಯರಿಗೂ ರಾಜೀವ್ ಗಾಂಧಿ ಆರೋಗ್ಯ ವಿವಿಯಿಂದ ತರಬೇತಿ ನೀಡಿ ತಯಾರಿ ಮಾಡಿಕೊಳ್ಳಲಾಗ್ತಿದೆ. ಐಸಿಯು ಹಾಗೂ ಆಕ್ಸಿಜನ್ ಬೆಡ್ ಗಳನ್ನ ಹೆಚ್ಚಳ ಮಾಡಲಾಗಿದೆ.
ಐಸಿಯು ಹಾಗೂ ಆಕ್ಸಿಜನ್ ಬೆಡ್ ನಿರ್ವಹಣೆಗೆ ಎಂಬಿಬಿಎಸ್ ವೈದ್ಯರ ನೇಮಕ ಜೊತೆ ತರಬೇತಿ
ಈಗಾಗಲೇ ಆರೋಗ್ಯ ಇಲಾಖೆಯಲ್ಲಿ 1740 ವೈದ್ಯರನ್ನ ನೇರ ನೇಮಕಾತಿ ಮಾಡಲಾಗಿದ್ದು, 1001 ವೈದ್ಯರನ್ನ ಗುತ್ತಿಗೆ ಆಧಾರದಲ್ಲಿ ಒಂದು ವರ್ಷದ ಅವಧಿಗೆ ನೇಮಕಾತಿ ಮಾಡಲಾಗಿದೆ. ಇವರನ್ನ 18 ವೈದ್ಯಕೀಯ ಕಾಲೇಜುಗಳಲ್ಲಿ ನೇಮಿಸಲಾಗಿದೆ. ಮೂರನೇ ಅಲೆಯಲ್ಲಿ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಬಲ್ಲ ಕಾರಣಕ್ಕೆ ಪಿಡಿಯಾಟ್ರಿಕ್ ವಿಭಾಗದಲ್ಲಿ ತಾಲೂಕು ಹಾಗೂ ಜಿಲ್ಲಾಸ್ಪತ್ರೆಗಳಿಗೆ ಐಸಿಯುಗಳಲ್ಲಿ ಕೆಲಸ ಮಾಡಲು ತಜ್ಞರೊಂದಿಗೆ ಎಂಬಿಬಿಎಸ್ ವೈದ್ಯರ ಅವಶ್ಯಕತೆ ಇದೆ. ಐಸಿಯುನಲ್ಲಿ ಯಾವ ರೀತಿ ಕೆಲಸ ಮಾಡಬೇಕು ಎಂಬುದರ ಕುರಿತು ತರಬೇತಿಯನ್ನೂ ಸಹ ನೀಡಲಾಗ್ತಿದೆ ಅಂದರು.