ಬೆಂಗಳೂರು : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ 2021ರ ಡಿಸೆಂಬರ್ ತಿಂಗಳಲ್ಲಿ ಹಮ್ಮಿಕೊಂಡಿದ್ದ ಇ-ಹರಾಜು ಪ್ರಕ್ರಿಯೆ ಪೂರ್ಣಗೊಂಡಿದೆ. ಜನರಿಂದ ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಒಟ್ಟು 372 ನಿವೇಶನಗಳು ಇ-ಹರಾಜಿನಲ್ಲಿವೆ. ಈ ಪೈಕಿ 296 ನಿವೇಶನಗಳು ಮಾರಾಟವಾಗಿವೆ. ಯಶಸ್ವಿಯಾಗದ ಬಿಡ್‌ದಾರರಿಗೆ ಪ್ರಾರಂಭಿಕ ಠೇವಣಿ ಹಣವನ್ನು ಹಿಂದಿರುಗಿಸಲಾಗ್ತಿದೆ ಎಂದು ಬಿಡಿಎ ತಿಳಿಸಿದೆ.
296 ನಿವೇಶನಗಳ ಪ್ರಾರಂಭಿಕ ಮೊತ್ತ ರೂ. 215 ಕೋಟಿಗಳಾಗಿದೆ. ಈ ನಿವೇಶನಗಳು ರೂ. 348 ಕೋಟಿಗಳಿಗೆ ಹರಾಜಿನಲ್ಲಿ ಮಾರಾಟವಾಗಿರುತ್ತದೆ. ರೂ. 133 ಕೋಟಿಗಳಷ್ಟು ಅಧಿಕ ಆದಾಯ ಸಂಗ್ರಹವಾಗಿದೆ.
ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ 118 ಮೂಲೆ ನಿವೇಶನಗಳನ್ನು ಇ-ಹರಾಜಿನಲ್ಲಿ ಪ್ರಕಟಿಸಲಾಗಿದೆ. ಇವುಗಳಲ್ಲಿ 80 ಮೂಲೆ ನಿವೇಶಗಳು ಹರಾಜಿನಲ್ಲಿ ಮಾರಾಟವಾಗಿರುತ್ತದೆ. ಈ ನಿವೇಶನಗಳ ಪ್ರಾರಂಭಿಕ ಮೊತ್ತ ರೂ. 44.28 ಕೋಟಿಗಳಾಗಿದೆ. ರೂ. 63.59 ಕೋಟಿಗಳಿಗೆ ಹರಾಜಿನಲ್ಲಿ ಮಾರಾಟವಾಗಿದೆ. ರೂ. 19.31 ಕೋಟಿಗಳಷ್ಟು ಅಧಿಕ ಆದಾಯ ಮೊತ್ತ ಸಂಗ್ರಹವಾಗಿದೆ.
ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಗರಿಷ್ಠ ರೂ. 6,608/- ಪ್ರತಿ ಚದರ ಅಡಿ ಹಾಗೂ ಅರ್ಕಾವತಿ ಬಡಾವಣೆಯಲ್ಲಿ ಗರಿಷ್ಠ ರೂ. 14,368/- ಪ್ರತಿ ಚದರ ಅಡಿಗೆ ಮಾರಾಟವಾಗಿದೆ. ಮುಂದಿನ ಜನವರಿ ತಿಂಗಳಲ್ಲಿ ಸುಮಾರು 500 ಮೂಲೆ ನಿವೇಶನಗಳು ಹಾಗೂ 500 ಮಧ್ಯಂತರ ನಿವೇಶನಗಳ ಇ-ಹರಾಜು ನಡೆಸಲಾಗುವುದು ಎಂದು ಬಿಡಿಎ ತಿಳಿಸಿದೆ.