ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ರಾಜಕಾಲುವೆ ಒತ್ತುವರಿ ಮಾಡಿಕೊಂಡಿದ್ದ 2,052 ಪ್ರಕರಣಗಳನ್ನು ತೆರವು ಮಾಡಿರುವುದಾಗಿ ಬಿಬಿಎಂಪಿ ಹೈಕೋರ್ಟ್ಗೆ ತಿಳಿಸಿದೆ.
ಕೆರೆಗಳ ಒತ್ತುವರಿ ತೆರವುಗೊಳಿಸುವಂತೆ ಕೋರಿ ಸಿಟಿಜನ್ ಆ್ಯಕ್ಷನ್ ಗ್ರೂಪ್ ಸೇರಿದಂತೆ ಮತ್ತಿತರರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯನ್ಯಾಯಮೂರ್ತಿ ಅಲೋಕ್ ಆರಾಧೆ ಅವರಿದ್ದ ವಿಭಾಗೀಯ ಪೀಠಕ್ಕೆ ಬಿಬಿಎಂಪಿಯ ರಾಜಕಾಲುವೆ ವಿಭಾಗದ ಮುಖ್ಯ ಇಂಜಿನಿಯರ್ ಎಂ.ಲೋಕೇಶ್ ಅವರು ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ಅನುಪಾಲನಾ ವರದಿ ಸಲ್ಲಿಸಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಹೊಸದಾಗಿ ಸಮೀಕ್ಷೆ ನಡೆಸಿ ಗುರುತಿಸಿರುವ 40 ಪ್ರಕರಣಗಳು ಸೇರಿದಂತೆ ಒಟ್ಟು 2,666 ರಾಜಕಾಲುವೆ ಒತ್ತುವರಿ ಪ್ರಕರಣಗಳಿವೆ. ಅವುಗಳಲ್ಲಿ ಅಕ್ಟೋಬರ್ 11ರ ಅಂತ್ಯದ ವೇಳೆಗೆ 2,052 ಒತ್ತುವರಿಗಳನ್ನು ತೆರವು ಮಾಡಲಾಗಿದೆ. ಇನ್ನುಳಿದಂತೆ 614 ಒತ್ತುವರಿಗಳಲ್ಲಿ 110 ಪ್ರಕರಣಗಳು ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣಾ ಹಂತದಲ್ಲಿದ್ದು, 504 ಒತ್ತುವರಿಗಳು ತೆರವು ಮಾಡಬೇಕಾಗಿದೆ ಎಂದು ಪ್ರಮಾಣ ಪತ್ರದಲ್ಲಿ ತಿಳಿಸಿದ್ದಾರೆ.
ಶೇ.50ರಷ್ಟು ಕೆರೆ ಒತ್ತುವರಿ ತೆರವು: ಇದೇ ವೇಳೆ, ಬಿಬಿಎಂಪಿ ಪರ ವಕೀಲರು, ಸುಬ್ರಹ್ಮಣ್ಯನಗರ ಮತ್ತು ಬೇಗೂರು ಕೆರೆಗಳಲ್ಲಿ ಒತ್ತುವರಿಯಾಗಿದ್ದ ಶೇ.50ರಷ್ಟು ಪ್ರಕರಣಗಳನ್ನು ಈಗಾಗಲೇ ತೆರವು ಮಾಡಲಾಗಿದೆ. ಇನ್ನುಳಿದ ಶೇ.50ರಷ್ಟು ಒತ್ತುವರಿ ತೆರವು ಕಾರ್ಯ ನಡೆಯುತ್ತಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಪೀಠ, ಸಂಪೂರ್ಣ ತೆರವು ಮಾಡಿ ಅನುಪಾಲನಾ ವರದಿಯನ್ನು ಸಲ್ಲಿಸಲು ಸೂಚನೆ ನೀಡಿ ವಿಚಾರಣೆ ಮುಂದೂಡಿತು.
ಅರ್ಜಿದಾರರಲ್ಲಿ ಒಬ್ಬರ ಪರ ವಕೀಲ ಜಿ.ಆರ್.ಮೋಹನ್, ಸಣ್ಣ ಒತ್ತುವರಿದಾರರ ಪ್ರಕರಣಗಳನ್ನು ಮಾತ್ರ ಬಿಬಿಎಂಪಿ ಗುರುತಿಸಿದೆ. ಆದರೆ, ರಾಜಕಾರಣಿಗಳು ಮತ್ತು ದೊಡ್ಡ ಬಿಲ್ಡರ್ ಕಂಪನಿಗಳ ಒತ್ತುವರಿದಾರರನ್ನು ಕೈಬಿಡಲಾಗಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು. ವಾದ ಆಲಿಸಿದ ನ್ಯಾಯಪೀಠ, ವಿಚಾರಣೆಯನ್ನು ಅ.14ಕ್ಕೆ ಮುಂದೂಡಿದೆ.
ಇದನ್ನೂ ಓದಿ: ಪೆಟ್ರೋಲ್ ಸುರಿದುಕೊಂಡು ರಾಜಕಾಲುವೆ ಒತ್ತುವರಿ ತೆರವಿಗೆ ಅಡ್ಡಿಪಡಿಸಿದ ದಂಪತಿ ವಿರುದ್ಧ ಎಫ್ಐಆರ್