ಬೆಂಗಳೂರು : ಕರ್ನಾಟಕದಲ್ಲಿ ಸಾರ್ವತ್ರಿಕ ಚುನಾವಣೆ ಇನ್ನು ಒಂದು ವರ್ಷ ಇರುವಾಗಲೇ ರಾಜಕೀಯ ಪಕ್ಷಗಳಿಂದ ಚುನಾವಣಾ ಸಿದ್ದತೆಗಳು ಆರಂಭಗೊಂಡಿವೆ. 2023ರ ವಿಧಾನಸಭೆ ಚುನಾವಣೆಗೆ ರಾಜ್ಯ ರಾಜಕೀಯದಲ್ಲಿ ಓಲೈಕೆ, ತಂತ್ರಗಾರಿಕೆಯೊಂದಿಗೆ ಯಾವ ವಿಚಾರ ಮುನ್ನಲೆಗೆ ತಂದರೆ? ಯಾರನ್ನು ಓಲೈಸಿದರೆ? ಪಕ್ಷಕ್ಕೆ ಲಾಭವಾಗುತ್ತದೆ ಎಂಬ ಲೆಕ್ಕಾಚಾರದಲ್ಲಿ ಪ್ರಮುಖ ಪಕ್ಷಗಳು ತೊಡಗಿವೆ.
ಇದರ ಜೊತೆಗೆ ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯಲು ಜೆಡಿಎಸ್ ಹೊಸ ಅಸ್ತ್ರ ಪ್ರಯೋಗಿಸಿದೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಹೊಸ ರಾಜಕೀಯ ಭವಿಷ್ಯ ಬರೆಯಲು ಸಜ್ಜಾಗುತ್ತಿರುವ ದಳಪತಿಗಳು, ಆಗಲೇ ತಂತ್ರ-ಪ್ರತಿತಂತ್ರ ಹೂಡಲು ಸಿದ್ಧರಾಗಿದ್ದಾರೆ. ಈ ನಡುವೆ ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯನ್ನು ಕಟ್ಟಿ ಹಾಕಲು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಪ್ಲಾನ್ ಮಾಡುತ್ತಿದ್ದಾರೆ.
ಶೀಘ್ರದಲ್ಲೇ ಧರ್ಮ ಗುರುಗಳ ಜೊತೆ ಮಹತ್ವದ ಚರ್ಚೆ ನಡೆಸಲು ಮುಂದಾಗಿರುವ ದಳಪತಿಗಳು, ಈ ವೇಳೆ ಕಾಂಗ್ರೆಸ್ ಕೊಡುಗೆ, ಮುಸ್ಲಿಮರ ರಕ್ಷಣೆ ಬಗ್ಗೆ ಕೆಲವು ಪ್ರಶ್ನೆಗಳನ್ನು ಮುಂದಿಡಲು ಯೋಚಿಸಿದ್ದಾರೆ ಎನ್ನಲಾಗಿದೆ. ಮುಂಬರುವ ವಿಧಾನಸಭೆ ಚುನಾವಣೆಗೆ ಕೈ ವಿರುದ್ಧ ದಳಪತಿಗಳು ರಾಜಕೀಯ ಸೂತ್ರ ಹೆಣೆದಿದ್ದಾರೆ. ಬರುವ ಚುನಾವಣೆಯಲ್ಲಿ ಧರ್ಮದ ಅಸ್ತ್ರ ಪ್ರಯೋಗಿಸಲು ಮುಂದಾಗಿರುವ ಅವರು, ಕಾಂಗ್ರೆಸ್‌ಗೆ ಪೆಟ್ಟು ಕೊಡಲು ವ್ಯೂಹ ರಚಿಸಿದ್ದಾರೆ.
2023ರ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಅಲ್ಪಸಂಖ್ಯಾತ ಮತಗಳೇ ಪ್ರಮುಖವಾಗಿವೆ. ಈ ಅಸ್ತ್ರ ಅರಿತಿರುವ ಕುಮಾರಸ್ವಾಮಿ ಅವರು ಹೊಸ ಬಾಣ ಹೂಡಲು ತಯಾರಿ ನಡೆಸಿದ್ದಾರೆ. ಮುಸ್ಲಿಂ ಧರ್ಮಗುರುಗಳ ಮುಂದೆ ಕಾಂಗ್ರೆಸ್ ಕೊಡುಗೆ, ಮುಸ್ಲಿಂಮರ ರಕ್ಷಣೆ ಬಗ್ಗೆ ಕೆಲವು ಪ್ರಶ್ನೆಗಳನ್ನು ಕೇಳಲು ಮುಂದಾಗುವರೆಂಬ ಚರ್ಚೆ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.
ಏನವು ಪ್ರಶ್ನೆಗಳು?: ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಕಾಂಗ್ರೆಸ್‌ನ ಹೋರಾಟ ಏನು?. ಹಿಜಾಬ್ ವಿವಾದವನ್ನು ಬಗೆಹರಿಸುವ ಬದಲು ಕಾಂಗ್ರೆಸ್ ನಿರಾಸಕ್ತಿ ತೋರಿಸಿದ್ದೇಕೆ?. ಡಿಜೆ ಹಳ್ಳಿ ಗಲಭೆಯಲ್ಲಿ ಕೈ ನಾಯಕರು ನಡೆದುಕೊಂಡ ರೀತಿ?. ಹೀಗೆ ಹಲವು ರೀತಿಯ ಪ್ರಶ್ನೆಗಳನ್ನು ಮುಂದಿಟ್ಟು ಕಾಂಗ್ರೆಸ್ ಬಣ್ಣ ಬಯಲು ಮಾಡುವ ಪ್ರಯತ್ಮ ಮಾಡುವ ಪ್ಲಾನ್ ರೂಪಿಸಲಾಗುತ್ತಿದೆ.
ದಲಿತ ಸಿಎಂ ಹೇಳಿಕೆ ಹಿಂದಿನ ಮರ್ಮವೇನು? : 'ಸಂದರ್ಭ ಬಂದರೆ ಮುಂದಿನ ಬಾರಿ ದಲಿತರನ್ನೇ ಮುಖ್ಯಮಂತ್ರಿ ಮಾಡಲು ತಯಾರಿದ್ದೇವೆ' ಎಂದು ಇತ್ತೀಚೆಗೆ ನಗರದಲ್ಲಿ ನಡೆದ ರೈತ ಸಂಘಟನೆ ಸಂವಾದದಲ್ಲಿ ಕುಮಾರಸ್ವಾಮಿ ಹೇಳಿರುವ ಹಿಂದಿನ ಮರ್ಮವೇನು? ಎಂಬುದು ಚರ್ಚೆಗೆ ಗ್ರಾಸವಾಗಿದೆ. ಚುನಾವಣೆ ಬಂದಾಗ ಪರಿಶಿಷ್ಟ ಜಾತಿಯ ಸಮುದಾಯಗಳಲ್ಲಿ ಆಸೆ ಹುಟ್ಟಿಸಲು ಆಡುವ ಈ ಮಾತುಗಳು ಮತಗಳನ್ನು ಒಡೆಯುವ ತಂತ್ರವಷ್ಟೇ ಎಂಬ ಮಾತುಗಳು ಕೇಳಿಬರುತ್ತಿವೆ.
ಇತ್ತೀಚೆಗೆ ಕುಮಾರಸ್ವಾಮಿ ಅವರು ಕೋಮು ಸಂಘರ್ಷಗಳು ಮತ್ತು ಹಿಂದುತ್ವ ಮೂಲಭೂತವಾದಿಗಳ ವಿರುದ್ಧ ತೊಡೆತಟ್ಟಿರುವುದು ಅವರ ಮಾತುಗಳಿಂದಲೇ ಗೊತ್ತಾಗುತ್ತದೆ. ಬಿಜೆಪಿ ವಿರುದ್ಧ ದಾಳ ಹೂಡುವ ಪ್ರತಿತಂತ್ರವೇ? ಎಂಬ ಪ್ರಶ್ನೆ ಮೂಡಿದೆ. ಏನೇ ಆದರೂ ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ ಮಾತಿನ ಸಮರ ಸಾರಿರುವ ಕುಮಾರಸ್ವಾಮಿ ಅವರ ಲೆಕ್ಕಾಚಾರ ಮಾತ್ರ ನಿಗೂಢವಾಗಿದೆ.
ಇದನ್ನೂ ಓದಿ: ಚಂದ್ರು ಕೊಲೆ ಪ್ರಕರಣ : ಎಂಎಲ್ಸಿ ರವಿಕುಮಾರ್ ವಿರುದ್ಧ ಜಮೀರ್ ಅಹ್ಮದ್ ಕಿಡಿ