ಬೆಂಗಳೂರು: ಮೇ 1 ರಿಂದ 18-44 ವರ್ಷದವರಿಗೆ ಉಚಿತ ಲಸಿಕೆ ಪ್ರಾರಂಭ ಆಗುವುದು ಅನುಮಾನ. ಸದ್ಯದ ಪರಿಸ್ಥಿತಿ ಪ್ರಕಾರ, ಕೋವಿಡ್ ಲಸಿಕೆ ಸಿಗುವುದು ಕಷ್ಟ ಇದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ತಿಳಿಸಿದರು.
ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸದ್ಯ ನಾವು ಈಗಾಗಲೇ 1 ಕೋಟಿ ಲಸಿಕೆ ಆರ್ಡರ್ ಮಾಡಿದ್ದೇವೆ. ಮೇ1 ರಿಂದ 18 ವರ್ಷದ ಮೇಲ್ಪಟ್ಟವರಿಗೆ ಲಸಿಕೆ ನೀಡಬೇಕು. ಆದರೆ ಆರ್ಡರ್ ಮಾಡಿರೋ ಲಸಿಕೆ ಬಂದ ಮೇಲೆ ನಾವು ಲಸಿಕೆ ನೀಡುತ್ತೇವೆ. ಸದ್ಯ ಈಗ ಇರುವ ಪರಿಸ್ಥಿತಿ ನೋಡಿದ್ರೆ, 1 ನೇ ತಾರೀಕು ಲಸಿಕೆ ನೀಡೋದು ಅನುಮಾನ. ಲಸಿಕೆ ಬಂದ ಮೇಲೆ ಲಸಿಕೆ ನೀಡುತ್ತೇವೆ. ಜೊತೆಗೆ ಮತ್ತೊಂದು ಕೋಟಿ ಲಸಿಕೆ ಖರೀದಿ ಮಾಡೋದಕ್ಕೆ ಸಿಎಂ ಹೇಳಿದ್ದಾರೆ. ಅದನ್ನು ಸಹ ಖರೀದಿಸಲು ನಾವು ಮುಂದಾಗಿದ್ದೇವೆ ಎಂದರು.
ಏಪ್ರಿಲ್ 28ರ ವರದಿ ಪ್ರಕಾರ, ಈ ವರೆಗೆ 92,40,078 ಜನರಿಗೆ ಕೋವಿಡ್ ಲಸಿಕೆ ನೀಡಲಾಗಿದೆ. 44-59 ವರ್ಷದವರಿಗೆ 33,71,403 ಮಂದಿಗೆ ಮೊದಲ ಡೋಸ್ ಲಸಿಕೆ ನೀಡಿದ್ದು, 2,13,828 ಜನರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. 60 ವರ್ಷ ಮೇಲ್ಪಟ್ಟವರಿಗೆ 34,33,743 ಮೊದಲ ಡೋಸ್ ಲಸಿಕೆ ಆಗಿದ್ದು, 2ನೇ ಡೋಸ್ ಪಡೆದಿರುವವರು 6,20,651 ಜನ ಮಾತ್ರ. ಸದ್ಯಕ್ಕೆ ರಾಜ್ಯದಲ್ಲಿ 5.57 ಲಕ್ಷ ಲಸಿಕೆ ದಾಸ್ತಾನು ಇದೆ ಇಂದು ಕೇಂದ್ರದ ಅಂಕಿ ಸಂಖ್ಯೆ ತಿಳಿಸುತ್ತಿದೆ ಎಂದು ಹೇಳಿದರು.
ಲಸಿಕೆ ಕೊರತೆ ಕುರಿತು ನಿನ್ನೆ ಆರೋಗ್ಯ ಸಚಿವರಿಗೆ ಈಟಿವಿ ಭಾರತ್ ಪ್ರಶ್ನಿಸಿದಾಗ, ಲಸಿಕೆ ಕೊರತೆ ಇಲ್ಲ ಎಂದು ಸಚಿವ ಸುಧಾಕರ್ ತಳ್ಳಿಹಾಕಿದರು. ಆದರೆ ಅನೇಕರು ಎರಡನೇ ಡೋಸ್ ಲಸಿಕೆಗೆ ಆಸ್ಪತ್ರೆಯನ್ನು ಸಂಪರ್ಕಿಸಿದಾಗ ಲಸಿಕೆ ಕೊರತೆ ಇದೆ ಎಂದು ಸಿಬ್ಬಂದಿ ಹೇಳುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಮೊದಲ ಡೋಸ್ ಲಸಿಕೆ ಹಾಗೂ ಎರಡನೇ ಡೋಸ್ ಲಸಿಕೆಯ ಅಂತರ ಕಾಣಿಸುತ್ತಿದೆ.
ಸರ್ಕಾರದ ಪ್ರಕಾರ, 18-44 ವರ್ಷದವರಿಗೆ ಲಸಿಕೆ ಹಾಕುವುದರ ಜೊತೆಗೆ 45 ವರ್ಷ ಮೇಲ್ಪಟ್ಟವರಿಗೂ ಲಸಿಕೆ ಕಾರ್ಯಕ್ರಮ ಮುಂದುವರಿಯಬೇಕು. ಆದರೆ ಎರಡನೇ ಅಲೆಯಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಪಡೆಯಲು ಮುಂದಾಗುತ್ತಿದ್ದಾರೆ.
ಓದಿ: ಕೋವಿಡ್ ವ್ಯಾಕ್ಸಿನ್ಗಾಗಿ ವೆನ್ಲಾಕ್ ಆಸ್ಪತ್ರೆ ಮುಂಭಾಗ ಕ್ಯೂ: ಲಸಿಕೆ ಇಲ್ಲದಿರುವುದಕ್ಕೆ ಆಕ್ರೋಶ