ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಮಂತ್ರಿ ಮಂಡಲದಲ್ಲಿ ೧೭ ಜಿಲ್ಲೆಗಳಿಗೆ ಸಚಿವ ಸ್ಥಾನದ ಪ್ರಾತಿನಿಧ್ಯ ದೊರೆತಿಲ್ಲ. 17 ಜನ ಸಚಿವರು ಇಂದು ಪ್ರಮಾಣ ವಚನ ಸ್ವೀಕಾರ ಮಾಡಿದರಾದರೂ ೧೩ ಜಿಲ್ಲೆಗಳಿಗಷ್ಟೇ ಪ್ರಾತಿನಿಧ್ಯ ಲಭಿಸಿದೆ. ರಾಜ್ಯದ ರಾಜಧಾನಿ ಬೆಂಗಳೂರಿಗೆ ನಾಲ್ವರು ಸಚಿವರು ದೊರಕಿದ್ದರೆ ರಾಜ್ಯದ ಅತಿದೊಡ್ಡ ಜಿಲ್ಲೆ ಬೆಳಗಾವಿಗೆ ಎರಡು ಸಚಿವ ಸ್ಥಾನ ನೀಡಲಾಗಿದೆ.
ಸಚಿವ ಸ್ಥಾನ ಇಲ್ಲದ ಜಿಲ್ಲೆಗಳು:
- ಮೈಸೂರು
- ಕೊಡಗು
- ಮಂಡ್ಯ
- ಚಾಮರಾಜನಗರ
- ರಾಮನಗರ
- ಬೆಂಗಳೂರು ಗ್ರಾಮಾಂತರ
- ಚಿಕ್ಕಬಳ್ಳಾಪುರ
- ದಾವಣಗೆರೆ
- ಬಳ್ಳಾರಿ
- ಕಲಬುರಗಿ
- ರಾಯಚೂರು
- ಯಾದಗಿರಿ
- ವಿಜಯಪುರ
- ಕೊಪ್ಪಳ
- ಉತ್ತರ ಕನ್ನಡ
- ದಕ್ಷಿಣ ಕನ್ನಡ
- ಹಾಸನ
ಸಚಿವ ಸ್ಥಾನದ ಪ್ರಾತಿನಿಧ್ಯ ದೊರೆತ ಜಿಲ್ಲೆಗಳು:
- ಬೆಂಗಳೂರು ನಾಲ್ಕು ( ಆರ್ ಅಶೋಕ್, ವಿ ಸೋಮಣ್ಣ, ಸುರೇಶ್ ಕುಮಾರ್, ಡಾ.ಅಶ್ವತ್ಥ ನಾರಾಯಣ )
- ಬೆಳಗಾವಿ ಎರಡು ( ಲಕ್ಷ್ಮಣ ಸವದಿ, ಶಶಿಕಲಾ ಜೊಲ್ಲೆ)
- ಬಾಗಲಕೋಟೆ ( ಗೋವಿಂದ ಕಾರಜೋಳ )
- ಶಿವಮೊಗ್ಗ ( ಕೆ.ಎಸ್ ಈಶ್ವರಪ್ಪ )
- ಧಾರವಾಡ ( ಜಗದೀಶ್ ಶೆಟ್ಟರ್ )
- ಚಿತ್ರದುರ್ಗ ( ಶ್ರೀ ರಾಮುಲು )
- ಚಿಕ್ಕಮಗಳೂರು ( ಸಿ.ಟಿ ರವಿ )
- ಹಾವೇರಿ ( ಬಸವರಾಜ ಬೊಮ್ಮಾಯಿ )
- ಉಡುಪಿ ( ಕೋಟಾ ಶ್ರೀನಿವಾಸ ಪೂಜಾರಿ )
- ತುಮಕೂರು ( ಜೆ.ಸಿ ಮಾಧುಸ್ವಾಮಿ )
- ಗದಗ ( ಸಿಸಿ ಪಾಟೀಲ್ )
- ಕೋಲಾರ ( ಹೆಚ್ ನಾಗೇಶ್ )
- ಬೀದರ್ ( ಪ್ರಭು ಚವ್ಹಾಣ್ )
ಇನ್ನು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ಶ್ರೀರಾಮುಲು ಮೂಲತಃ ಬಳ್ಳಾರಿ ಜಿಲ್ಲೆಯವರಾದರೂ ಅವರು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಶಾಸಕರಾಗಿದ್ದರಿಂದ ಚಿತ್ರದುರ್ಗ ಜಿಲ್ಲೆಗೆ ಪ್ರಾತಿನಿಧ್ಯ ನೀಡಿದಂತಾಗುತ್ತದೆ. ಹಳೇ ಮೈಸೂರು ಭಾಗದಲ್ಲಿಯ ಜಿಲ್ಲೆಗಳಿಗೂ ಹೆಚ್ಚಿನ ಪ್ರಾತಿನಿಧ್ಯ ಲಭಿಸಿಲ್ಲ, ದಕ್ಷಿಣ ಕನ್ನಡ, ಮೈಸೂರು, ಕೊಡಗು, ಚಾಮರಾಜನಗರ, ಮಂಡ್ಯ, ರಾಮನಗರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಸಂಪುಟ ವಿಸ್ತರಣೆಯಲ್ಲಿ ಅವಕಾಶ ಸಿಕ್ಕಿಲ್ಲ.
ಸಚಿವ ಸಂಪುಟ ವಿಸ್ತರಣೆಯಲ್ಲಿ ಹೈದರಾಬಾದ್ ಕರ್ನಾಟಕಕ್ಕೂ ಹೆಚ್ಚು ಪ್ರಾತಿನಿಧ್ಯ ದೊರೆತಿಲ್ಲ. ಬಿಜೆಪಿಯ ಭದ್ರ ಕೋಟೆ ಯಾದ ಮಂಗಳೂರು, ದಾವಣಗೆರೆ, ಕೊಡಗು ಜಿಲ್ಲೆಗಳಿಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ಸಚಿವ ಸ್ಥಾನ ಆಕಾಂಕ್ಷಿತರಲ್ಲಿ ಅಸಮಾಧಾನ ಮನೆ ಮಾಡಿದೆ.