ಬೆಂಗಳೂರು: ರಾಜ್ಯದಲ್ಲಿ ನೆರೆಹಾನಿಯಿಂದಾಗಿ 15410 ಕೋಟಿ ರೂ.ಗಳಷ್ಟು ನಷ್ಟವಾಗಿದ್ದು, ಸಂತ್ರಸ್ತರಿಗೆ ನೆರವಾಗಲು ಪೂರಕವಾಗಿ ಪರಿಹಾರ ನಿಧಿಯನ್ನು ರಾಜ್ಯಕ್ಕೆ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕೆಂದು ರಾಜ್ಯಕ್ಕೆ ಆಗಮಿಸಿರುವ ಇಂಟರ್ ಮಿನಿಸ್ಟರಿಯಲ್ ಸೆಂಟ್ರಲ್ ಟೀಮ್ ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಕೇಂದ್ರ ಅಧ್ಯಯನ ತಂಡದೊಂದಿಗೆ ಮಾತುಕತೆ ನಡೆಸಿದ ಸಿಎಂ, ರಾಜ್ಯದಲ್ಲಿ ನೆರೆ ಹಾನಿ ಸಂಭವಿಸಿದಾಗ ಎರಡು ಬಾರಿ ಪ್ರಧಾನಿ ನರೇಂದ್ರ ಮೋದಿ ವೈಯಕ್ತಿಕವಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ವಿವರ ಪಡೆದು ಅಗತ್ಯ ನೆರವು, ಸಹಕಾರದ ಭರವಸೆ ನೀಡಿದ್ದರು. ರಾಷ್ಟ್ರೀಯ ವಿಪತ್ತು ನಿಧಿಯಿಂದ ತಕ್ಷಣದ ನೆರೆ ಪರಿಹಾರಕ್ಕಾಗಿ 577.84 ಕೋಟಿ ರೂಗಳನ್ನು ಬಿಡುಗಡೆ ಮಾಡಿದ್ದಾರೆ. ಜೊತೆಗೆ 2ನೇ ಬಾರಿ ಕೇಂದ್ರದ ಅಧ್ಯಯನ ತಂಡವನ್ನು ರಾಜ್ಯಕ್ಕೆ ಕಳುಹಿಸಿ ಕೊಟ್ಟಿರುವುದಕ್ಕೆ ಪ್ರಧಾನಿ ಮೋದಿ ಹಾಗು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.
ಓದಿ: ರಾಜ್ಯಕ್ಕೆ ಕೇಂದ್ರ ಅಧ್ಯಯನ ತಂಡ ಆಗಮನ: ನಾಳೆ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ
ಆಗಸ್ಟ್ ನಲ್ಲಿ ತಲೆದೂರಿದ ನೆರೆಹಾವಳಿಯ ನಂತರ ರಾಜ್ಯದಲ್ಲಿ ಎರಡು ಬಾರಿ ಮತ್ತೆ ಅಧಿಕ ಮಳೆಯಿಂದಾಗಿ ನೆರೆ ಹಾನಿ ಸಂಭವಿಸಿತು. ಸೆಪ್ಟೆಂಬರ್ 2ನೇ ವಾರ ಮತ್ತು ಅಕ್ಟೋಬರ್ 3ನೇ ವಾರದಲ್ಲಿ ರಾಜ್ಯದಲ್ಲಿ ವ್ಯಾಪಕವಾಗಿ ನೆರೆಹಾನಿ ಸಂಭವಿಸಿತು, ಮಹಾರಾಷ್ಟ್ರದ ಜಲಾಶಯಗಳಿಂದ ಹೆಚ್ಚುವರಿ ನೀರನ್ನು ರಾಜ್ಯಕ್ಕೆ ಬಿಡುಗಡೆ ಮಾಡಲಾಯಿತು. ಇದರಿಂದಾಗಿ ಕೃಷ್ಣ ಹಾಗೂ ಭೀಮಾತೀರದ ಗ್ರಾಮಗಳು ಜಲಾವೃತವಾಗುವಂತಾಯಿತು.ಈ ನೆರೆ ಹಾನಿಯಿಂದ 16 ಲಕ್ಷ ಹೆಕ್ಟೇರ್ ಬೆಳೆ ಹಾನಿ ಸಂಭವಿಸಿದೆ. 34794 ಮನೆಗಳು ಹಾನಿಗೀಡಾಗಿವೆ, ಒಟ್ಟಾರೆ 15410 ಕೋಟಿಯಷ್ಟು ಹಾನಿ ಸಂಭವಿಸಿರುವುದಾಗಿ ಕೇಂದ್ರ ತಂಡಕ್ಕೆ ಸಿಎಂ ಮಾಹಿತಿ ನೀಡಿದರು.
ಕೇಂದ್ರ ಅಧ್ಯಯನ ತಂಡಕ್ಕೆ ಸಿಎಂ ಬಿಎಸ್ವೈ ಮನವಿ
ಈಗಾಗಲೇ ರಾಜ್ಯ ಸರ್ಕಾರ 7.12 ಲಕ್ಷ ರೈತರಿಗೆ 551.14 ಕೋಟಿ ರೂಪಾಯಿಗಳ ಇನ್ಪುಟ್ ಸಬ್ಸಿಡಿಯನ್ನು ತಕ್ಷಣದ ಪರಿಹಾರಕ್ಕೆ ಬಿಡುಗಡೆ ಮಾಡಿದೆ. 1320.48 ಕೋಟಿ ರೂಪಾಯಿಗಳಷ್ಟು ಹಣಕಾಸಿನ ನೆರವನ್ನು ನೆರೆ ಹಾನಿ ಪರಿಹಾರ, ದುರಸ್ತಿ ಹಾಗೂ ನಿರ್ಮಾಣ ಕಾಮಗಾರಿಗಳಿಗೆ ರಾಜ್ಯ ಸರ್ಕಾರ ಭರವಸೆ ನೀಡಿದೆ. ಸಂಪೂರ್ಣ ಹಾನಿಗೀಡಾದ ಮನೆಗಳ ಪುನರ್ ನಿರ್ಮಾಣಕ್ಕಾಗಿ 5 ಲಕ್ಷ ನೆರವು, ಬಹುತೇಕ ಹಾನಿಗೊಳಗಾದ ಮನೆಗಳ ದುರಸ್ತಿಗಾಗಿ 3 ಲಕ್ಷ ಮತ್ತು ಭಾಗಶಃ ಹಾನಿಯಾಗಿರುವ ಮನೆಗಳ ದುರಸ್ತಿಗೆ 50 ಸಾವಿರ ರೂಪಾಯಿಗಳ ಪರಿಹಾರವನ್ನು ನೀಡುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ.
ವಸತಿ ನಿರ್ಮಾಣದ ನೆರವಿಗಾಗಿ 465 ಕೋಟಿ ರೂಗಳನ್ನು ಈ ವರ್ಷ ವಿನಿಯೋಗ ಮಾಡುತ್ತಿದೆ. ಹಾಗಾಗಿ ಈ ಬಾರಿ ಅಂದಾಜು ಮಾಡಿದಂತೆ 15410 ಕೋಟಿ ರೂಗಳ ಹಣವನ್ನು ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಇಂಟರ್ ಮಿನಿಸ್ಟರಿಯಲ್ ಸೆಂಟ್ರಲ್ ಟೀಮ್ ಗೆ ಸಿಎಂ ಮನವಿ ಮಾಡಿದ್ದಾರೆ.