ಬೆಂಗಳೂರು: ರಾಜ್ಯದಲ್ಲಿ ಈಗಾಗಲೇ 15 ಸಾವಿರ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ. ಉಚ್ಛ ನ್ಯಾಯಾಲಯದ ಆದೇಶದ ಮೇರೆಗೆ ಈ ಬಗ್ಗೆ ಅನುಷ್ಠಾನ ಮಾಡಲಾಗುವುದು. ಬರುವ ವರ್ಷದಲ್ಲಿ ಶಿಕ್ಷಕರ ಕೊರತೆ ನೀಗಿಸುವ ಸಲುವಾಗಿ ಇನ್ನೂ 15 ಸಾವಿರ ಶಿಕ್ಷಕರನ್ನು ನೇಮಕ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಮಹಾಲಕ್ಷ್ಮಿ ಲೇಔಟ್ನಲ್ಲಿ ಮಾದರಿ ಶಾಲೆ ಉದ್ಘಾಟನೆ ಬಳಿಕ ಮಾತನಾಡಿದ ಸಿಎಂ, ಕಳೆದ ವಾರ ಗೋವಿಂದರಾಜನಗರ ಕ್ಷೇತ್ರದಲ್ಲೂ ಶಾಲೆ ಮತ್ತು ಕಾಲೇಜಿನ ಉದ್ಘಾಟನೆ ಮಾಡಲಾಗಿದೆ. ಈಗ ಮಹಾಲಕ್ಷ್ಮಿ ಲೇಔಟ್ನಲ್ಲಿ ಮಾದರಿ ಶಾಲೆಯನ್ನು ಉದ್ಘಾಟನೆ ಮಾಡಲಾಗಿದೆ. ಬಹುತೇಕವಾಗಿ ಖಾಸಗಿ ವಲಯಕ್ಕಿಂತ ಹೆಚ್ಚು ಆಧುನಿಕವಾದ ಪ್ರಯೋಗಾಲಯಗಳನ್ನು ಹೊಂದಿದೆ. ಸುಮಾರು 6 ಸಾವಿರ ಮಕ್ಕಳು ವಿದ್ಯಾಭ್ಯಾಸ ಮಾಡುವ 4 ಶಾಲೆಗಳನ್ನು ಆಧುನೀಕರಣ ಮಾಡಲಾಗಿದೆ. ಮೂಲಭೂತ ಸೌಕರ್ಯ ಬಹಳ ಮುಖ್ಯ. ಸಚಿವ ಕೆ. ಗೋಪಾಯ್ಯ ಅವರು ತಮ್ಮ ಟ್ರಸ್ಟ್ನಿಂದ ಶಿಕ್ಷಕರನ್ನು ಸರ್ಕಾರಿ ಶಾಲೆಗಳಿಗೆ ನೇಮಿಸಿ, ವೇತನವನ್ನೂ ನೀಡುತ್ತಿದ್ದಾರೆ. ಹಲವಾರು ಸಂಘ ಸಂಸ್ಥೆಗಳ ಸಹಕಾರವನ್ನೂ ಪಡೆದುಕೊಳ್ಳಬೇಕು. ಸರ್ಕಾರವೂ ಇದಕ್ಕೆ ಸಹಾಯ ಮಾಡುತ್ತದೆ. ಒಂದು ರೀತಿಯಲ್ಲಿ ನಗರದ ಕೊಳಗೇರಿಗಳಲ್ಲಿರುವ ಶಿಕ್ಷಣದಿಂದ ವಂಚಿತರಾದವರಿಗೆ ಇದರಿಂದ ಒಳ್ಳೆಯ ಅವಕಾಶ ದೊರೆತಿದೆ ಎಂದರು.
ಶಾಲೆಗಳ ಆಧುನೀಕರಣ: ಸರ್ಕಾರಿ ಶಾಲೆ, ಆಸ್ಪತ್ರೆಗೆ ಜನ ಬರುತ್ತಿದ್ದಾರೆ. ಕಾಲ ಬದಲಾವಣೆಯಾಗಿದೆ. ಹಿಂದೆ ಬಿಬಿಎಂಪಿಯಲ್ಲಿ ಇಂತಹ ಶಾಲೆ ಆಗುವುದೆಂಬ ಕಲ್ಪನೆಯೂ ಇರಲಿಲ್ಲ. 108 ನಮ್ಮ ಕ್ಲಿನಿಕ್ ಉದ್ಘಾಟನೆ ಮಾಡಲಾಗಿದ್ದು, ಕ್ಲಿನಿಕ್‍ನಲ್ಲಿ ಬಿಪಿ, ಶುಗರ್ ಪರೀಕ್ಷೆ ನಡೆಸಲು ಚಿಕ್ಕ ಪ್ರಯೋಗಾಲಯವೂ ಲಭ್ಯವಿದೆ. ಸರ್ಕಾರದ ಚಿಂತನೆ ಮತ್ತು ಅನುಷ್ಠಾನ ಬಹಳಷ್ಟು ಉತ್ತಮ ಆಗಿರುವುದರಿಂದ ಜನರು ಬರುತ್ತಿದ್ದಾರೆ. ಗೋವಿಂದರಾಜನಗರದಲ್ಲಿ ಎಲ್ಲಾ ಶಾಲೆಗಳ ಆಧುನೀಕರಣ ಮಾಡಿದ್ದಾರೆ. ಬಹುತೇಕ ಎಲ್ಲಾ ಶಾಸಕರೂ ಈ ಕೆಲಸ ಮಾಡಿದ್ದಾರೆ. ಅದೇ ರೀತಿ ಆಸ್ಪತ್ರೆಗಳು ಬಹಳಷ್ಟು ನಿರ್ಮಾಣವಾಗಿದೆ ಎಂದು ಹೇಳಿದರು.
ಈಗ ಅನುಷ್ಠಾನ ಮಾಡುವ ಕಾಲ: ಆಂಧ್ರಪ್ರದೇಶ ಸರ್ಕಾರ ಕೃಷ್ಣಾ ಮೇಲ್ದಂಡೆ ಯೋಜನೆಗೆ ವಿರೋಧ ಮಾಡುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಿಎಂ, ಅವರು ವಿರೋಧಿಸುವ ಕಾಲ ಮುಗಿದಿದೆ. ಈಗ ಅನುಷ್ಠಾನ ಮಾಡುವ ಕಾಲ ಬಂದಿದೆ ಎಂದು ತಿಳಿಸಿದರು.
ಶಿಕ್ಷಣ ಸಚಿವರಿಂದ ಸಭೆ: 15,000 ಪ್ರಾಥಮಿಕ ಶಾಲಾ ಶಿಕ್ಷಕರ (6ರಿಂದ 8ನೇ ತರಗತಿ) ನೇಮಕ ಪ್ರಕ್ರಿಯೆಯನ್ನು ಆದಷ್ಟು ಬೇಗ ಪೂರ್ಣ ಗೊಳಿಸುವ ನಿಟ್ಟಿನಲ್ಲಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ವಿಧಾನಸೌಧದಲ್ಲಿ ಮಂಗಳವಾರ ಸಭೆ ನಡೆಸಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಅಡ್ವೊಕೇಟ್ ಜನರಲ್, ಕಾನೂನು ಇಲಾಖೆ ಮತ್ತು ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಶೀಘ್ರದಲ್ಲೇ 15,000 ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸೂಚಿಸಿದ್ದಾರೆ.
ತಾತ್ಕಾಲಿಕ ಆಯ್ಕೆ ಪಟ್ಟಿ ರದ್ದುಗೊಳಿಸಿರುವ ಹೈಕೋರ್ಟ್: 15 ಸಾವಿರ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಸಂಬಂಧ ಶಿಕ್ಷಣ ಇಲಾಖೆ ಹೊರಡಿಸಿದ್ದ 1:1 ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಕೆಲ ದಿನಗಳ ಹಿಂದೆ ಹೈಕೋರ್ಟ್ ರದ್ದುಪಡಿಸಿತ್ತು. ಅಭ್ಯರ್ಥಿಗಳ ತಂದೆಯ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಪರಿಗಣಿಸಿ ಹೊಸದಾಗಿ ತಾತ್ಕಾಲಿಕ ಪಟ್ಟಿ ಪ್ರಕಟ ಮಾಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಕೋರ್ಟ್ ಸೂಚನೆ ನೀಡಿದೆ.
ತಂದೆಯ ಆದಾಯ ಪ್ರಮಾಣ ಪತ್ರವನ್ನು ಸಲ್ಲಿಸಿದ್ದ ವಿವಾಹಿತ ಮಹಿಳಾ ಅಭ್ಯರ್ಥಿಗಳನ್ನು ತಾತ್ಕಾಲಿಕ ಆಯ್ಕೆ ಪಟ್ಟಿಯಿಂದ ಕೈಬಿಡಲಾಗಿತ್ತು. ಇದನ್ನು ಪ್ರಶ್ನಿಸಿ ಅಕ್ಷತಾ ಚೌಗುಲೆ ಸೇರಿ ಸುಮಾರು 20ಕ್ಕೂ ಅಧಿಕ ಅಭ್ಯರ್ಥಿಗಳು ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠವು ತಾತ್ಕಾಲಿಕ ಆಯ್ಕೆ ಪಟ್ಟಿ ರದ್ದುಗೊಳಿಸಿ ಆದೇಶ ನೀಡಿತ್ತು.
ಇದನ್ನೂ ಓದಿ: ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ತಾತ್ಕಾಲಿಕ ಪಟ್ಟಿ ರದ್ದುಗೊಳಿಸಿದ ಹೈಕೋರ್ಟ್