ಬೆಂಗಳೂರು: ನಾಲ್ಕು ರಸ್ತೆ ಸಾರಿಗೆ ನಿಗಮಗಳ ವೇತನ ಶೇ.15ರಷ್ಟು ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿದೆ. ಮಾರ್ಚ್ 1, 2023ರಿಂದ ಜಾರಿಗೆ ಬರುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಮತ್ತು ಪೂರ್ವ ಕಿಂಕೋ ಅಧಿಕಾರಿಗಳ/ ನೌಕರರ ವೇತನವನ್ನು ಶೇ.15 ಹೆಚ್ಚಿಸಿದೆ. ಎರಡು ದಿನಗಳ ಹಿಂದೆ ಸಿಎಂ ಬೊಮ್ಮಾಯಿ ರಸ್ತೆ ಸಾರಿಗೆ ನೌಕರರ ವೇತನವನ್ನು ಶೇ.15ರಷ್ಟು ಪರಿಷ್ಕರಿಸಿ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದ್ದರು. ಅದರಂತೆ ಇದೀಗ ಕೆಲ ನಿಬಂಧನೆಗೊಳಪಟ್ಟು ವೇತನ ಪರಿಷ್ಕರಿಸಿ ಸರ್ಕಾರ ಆದೇಶ ಹೊರಡಿಸಿದೆ.
ಸಾರಿಗೆ ನಿಗಮಗಳ ನೌಕರರ ವೇತನ ಶೇ.15ರಷ್ಟು ಹೆಚ್ಚಳ : ಆದರೆ, ಈಗಾಗಲೇ ಸಾರಿಗೆ ನೌಕರರು ಶೇ.15ರಷ್ಟು ವೇತನ ಪರಿಷ್ಕರಣೆಗೆ ಆಕ್ಷೇಪಿಸಿದ್ದು, ಮಾ.21 ರಿಂದ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ಈಗ ರಾಜ್ಯ ಸರ್ಕಾರ ಶೇ.15ರಷ್ಟು ವೇತನ ಪರಿಷ್ಕರಿಸಿ ಆದೇಶ ಹೊರಡಿಸಿದೆ. ವೇತನ ಪರಿಷ್ಕರಣೆ ಆದೇಶ ಹೊರಡಿಸಿದ ಬಳಿಕ ಮುಷ್ಕರದ ಬಗ್ಗೆ ಸಾರಿಗೆ ನೌಕರರ ಒಕ್ಕೂಟ ಏನು ನಿರ್ಧಾರ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕು.
ಪರಿಷ್ಕರಣೆಗೆ ಕೆಲ ನಿಬಂಧನೆಗೊಳಪಟ್ಟು, ಸರ್ಕಾರ ಅನುಮೋದನೆ ನೀಡಿ ಆದೇಶಿಸಿದೆ. ಅದರಂತೆ ರಾಜ್ಯದ ನಾಲ್ಕು ರಸ್ತೆ ಸಾರಿಗೆ ಸಂಸ್ಥೆಗಳು ಅಂದರೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ಅಧಿಕಾರಿಗಳು ಮತ್ತು ನೌಕರರು 31.12.2019ರಂದು ನಡೆಯುತ್ತಿದ್ದ ಮೂಲ ವೇತನವನ್ನು ಶೇ.15ರನ್ನು ಹೆಚ್ಚಿಸಿ, ಅದರಂತೆ ವೇತನ ಶ್ರೇಣಿಗಳನ್ನು ಪರಿಷ್ಕರಿಸಲಾಗುವುದು.
ಪೂರ್ವ ಕಿಂಕೋ ನೌಕರರೂ ಸೇರಿದಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಈ ನಾಲ್ಕು ರಸ್ತೆ ಸಾರಿಗೆ ಸಂಸ್ಥೆಗಳ ಅರ್ಹ ನೌಕರರ ಉನ್ನತ ವೇತನ ಶ್ರೇಣಿಗಳನ್ನು ಮತ್ತು ಮಧ್ಯಂತರ (ಸೆಲೆಕ್ಷನ್ ಗ್ರೇಡ್) ವೇತನ ಶ್ರೇಣಿಗಳನ್ನು ಶೇ.15ರಷ್ಟು ಹೆಚ್ಚಳ ಮಾಡಿ ಪರಿಷ್ಕರಿಸಲಾಗುವುದು.
ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳ ಪುನಶ್ಚೇತನಕ್ಕಾಗಿ ರಚಿಸಿರುವ ಏಕಸದಸ್ಯ ಸಮಿತಿ, ನಾಲ್ಕು ಸಾರಿಗೆ ನಿಗಮಗಳ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿರಿಸಿಕೊಂಡು ಹಾಗೂ ಸರ್ಕಾರದಿಂದ ಎಷ್ಟು ಪ್ರಮಾಣದ ಅನುದಾನದ ಅವಶ್ಯಕತೆ ಇದೆ ಎಂಬುದನ್ನು ಪರಿಶೀಲಿಸಿಕೊಂಡು, ಕಾರ್ಮಿಕ ಸಂಘಟನೆಗಳೂ ಸೇರಿದಂತೆ, ಸಂಬಂಧಪಟ್ಟವರೊಂದಿಗೆ ಚರ್ಚಿಸಿ, ಯಾವ ದಿನಾಂಕದಿಂದ ವೇತನ ಮತ್ತಿತರ ಬಾಕಿಗಳನ್ನು ಪಾವತಿಸಬೇಕು ಎಂಬುದನ್ನು ಒಂದು ತಿಂಗಳ ಕಾಲಮಿತಿಯೊಳಗೆ ಶಿಫಾರಸು ಮಾಡಲು ಸೂಚಿಸಲಾಗಿದೆ.
1-01-2016ರಿಂದ ಜಾರಿಗೆ ಬರುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಮತ್ತು ಪೂರ್ವ ಕಿಂಕೋ ಅಧಿಕಾರಿಗಳು/ ನೌಕರರು 31.12.2015 ರಂದು ನಡೆಯುತ್ತಿದ್ದ ಮೂಲ ವೇತನವನ್ನು ಶೇ.12.5ರಷ್ಟು ಹೆಚ್ಚಿಸಿ, ವೇತನ ಪರಿಷ್ಕರಿಸಿ ಆದೇಶಿಸಲಾಗಿತ್ತು.
ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳಲ್ಲಿ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನೌಕರರ ವೇತನ ಪರಿಷ್ಕರಣೆ ಮಾಡುವ ಪದ್ಧತಿ ಜಾರಿಯಲ್ಲಿದೆ. ಅದರಂತೆ 1.1.2016 ಜಾರಿಗೆ ತಂದಿರುವ ವೇತನ ಪರಿಷ್ಕರಣೆಯ ಅವಧಿ 31.12.2019ಕ್ಕೆ ಮುಕ್ತಾಯವಾಗಿರುತ್ತದೆ. ಪುಸ್ತುತ ನಿಗಮಗಳ ಆರ್ಥಿಕ ಪರಿಸ್ಥಿತಿ ಅವಲೋಕಿಸಿ ಮತ್ತು ನಿಗಮಗಳ ಪುನಶ್ವೇತನಕ್ಕಾಗಿ ರಚಿಸಿರುವ ಏಕಸದಸ್ಯ ಸಮಿತಿಯ ವರದಿಯನ್ನು ಪರಿಶೀಲಿಸಿ ನೌಕರರ ವೇತನವನ್ನು ಇದೀಗ ಶೇ.15ರಷ್ಟು ಪರಿಷ್ಕರಿಸಲು ಆದೇಶ ಹೊರಡಿಸಲಾಗಿದೆ.
ಇದನ್ನೂ ಓದಿ : ಯುಗಾದಿಗೂ ಮುನ್ನಾ ದಿನ ಕೆಎಸ್ಆರ್ಟಿಸಿ ನೌಕರರಿಂದ ಮುಷ್ಕರ: ಹಬ್ಬಕ್ಕೆ ತೆರಳುವವರಿಗೆ ತಟ್ಟಲಿದೆ ಮುಷ್ಕರದ ಬಿಸಿ