ಬೆಂಗಳೂರು: ವಿದೇಶದಿಂದ ರಾಜ್ಯಕ್ಕೆ ಆಗಮಿಸಿದ ಎಲ್ಲರೂ 14 ದಿನಗಳ ಹೋಂ ಕ್ವಾರಂಟೈನ್ ಇಂದಿಗೆ ಮುಕ್ತಾಯಗೊಂಡಿದೆ. ಕೊರೊನಾ ಸೋಂಕಿನ ಆತಂಕದಲ್ಲಿರುವ ರಾಜ್ಯದ ಜನತೆಗೆ ಸಂತಸದ ಸುದ್ದಿ ಸಿಕ್ಕಂತಾಗಿದೆ. ಆರೋಗ್ಯ ಇಲಾಖೆಯೂ ನಿಟ್ಟುಸಿರು ಬಿಡುವಂತಾಗಿದೆ ಈ ಕುರಿತ ಎಕ್ಸ್‌ಕ್ಲ್ಯೂಸಿವ್ ಸ್ಟೋರಿ ಇಲ್ಲಿದೆ.
ಚೀನಾದಲ್ಲಿ ಕೊರೊನಾ ಮಹಾಮಾರಿ ಕಾಣಿಸಿ ವಿಶ್ವವ್ಯಾಪಿ ಹರಡಲು ಆರಂಭಿಸಿದ ದಿನದಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮುಚ್ಚಿದ ಮಾರ್ಚ್ 22ರವರೆಗೆ ವಿವಿಧ ದೇಶಗಳಿಂದ ಕರ್ನಾಟಕಕ್ಕೆ1,28,000 ಜನ ಆಗಮಿಸಿದ್ದರು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮಂಗಳೂರು ವಿಮಾನ ನಿಲ್ದಾಣ, ಮಂಗಳೂರು ಹಾಗೂ ಕಾರವಾರದ ಕಡಲ ತೀರದ ಬಂದರುಗಳ ಮೂಲಕ ಇಷ್ಟು ಸಂಖ್ಯೆಯ ಜನ ರಾಜ್ಯದ ಗಡಿ ಪ್ರವೇಶ ಮಾಡಿದ್ದಾರೆ. ಇಷ್ಟೂ ಜನರ ಥರ್ಮಲ್ ಸ್ಕ್ರೀನಿಂಗ್ ನಡೆಸಿದ್ದ ಆರೋಗ್ಯ ಇಲಾಖೆ ಇದರಲ್ಲಿ ಅರ್ಧದಷ್ಟು ಜನರನ್ನು ನಿಗಾದಲ್ಲಿರಿಸಿತ್ತು. ಸೋಂಕಿನ ಶಂಕೆ ಇರುವವರನ್ನು ಪ್ರತ್ಯೇಕವಾಗಿರಿಸುವ ಕೆಲಸ ನಡೆದಿತ್ತು. ಕೆಲವರನ್ನು ಆಸ್ಪತ್ರೆಗಳಲ್ಲಿ, ಮತ್ತೆ ಕೆಲವರನ್ನು ಮಾಸ್ ಕ್ವಾರಂಟೈನ್‌ನಲ್ಲಿ, ಮತ್ತೊಂದಷ್ಟು ಜನರನ್ನು ಹೋಂ ಕ್ವಾರಂಟೈನ್‌ನಲ್ಲಿರಿಸಿ ನಿಗಾವಹಿಸಲಾಗಿತ್ತು. ಇದರ ಜೊತೆ ಉಳಿದವರನ್ನೂ ಸ್ವಯಂ ಹೋಂ ಕ್ವಾರಂಟೈನ್‌ಗೆ ಸೂಚಿಸಲಾಗಿತ್ತು.
ಇದೀಗ ಎಲ್ಲಾ ರೀತಿಯ ಕ್ವಾರಂಟೈನ್ ಅವಧಿಯ ಮೊದಲ ಹಂತವನ್ನು ಅಷ್ಟೂ ವಿದೇಶದಿಂದ ಬಂದ ಪ್ರಯಾಣಿಕರು ಮುಗಿಸಿದ್ದಾರೆ. ವಿಶ್ವದಾದ್ಯಂತ ಕ್ವಾರಂಟೈನ್ ಅವದಿ 14 ದಿನ ಇದ್ರೆ, ಕರ್ನಾಟಕದಲ್ಲಿ ಮಾತ್ರ ಹೆಚ್ಚಿನ ಮುಂಜಾಗ್ರತಾ ಕ್ರಮವಾಗಿ ಅದನ್ನು 28 ದಿನಗಳಿಗೆ ಹೆಚ್ಚಿಸಲಾಗಿದೆ. ಈಗಾಗಲೇ ಅರ್ಧ ಅವಧಿಯನ್ನು ಎಲ್ಲರೂ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಸೋಂಕಿತರನ್ನು ಹೊರತುಪಡಿಸಿ ಬಹುತೇಕ ಅಷ್ಟೂ ಜನ ಸೇಫ್. ಲಾಕ್‌ಡೌನ್ ಅವಧಿ ಇನ್ನೂ ಎರಡು ವಾರವಿದೆ. ಅಷ್ಟರಲ್ಲಿ 28 ದಿನಗಳ ಪೂರ್ತಿ ಸಮಯ ಮುಗಿಯಲಿದೆ. ಮೈಸೂರು ಹಾಗೂ ನಿಜಾಮುದ್ದೀನ್ ಪ್ರಕರಣ ಹೊರತುಪಡಿಸಿದರೆ ಇತರೆ ಸೋಂಕಿತರು ವಿದೇಶ ಪ್ರವಾಸದಿಂದ ಬಂದವರಾಗಿದ್ದಾರೆ. ಅವರನ್ನು ಬಿಟ್ಟು ವಿದೇಶದಿಂದ ಬಂದಿರುವ ಇತರೆ ಪ್ರಯಾಣಿಕರು ಇನ್ನೂ ಬಹುತೇಕ ಸೇಫ್. ಈಗೇನಿದ್ದರೂ ಸೋಂಕಿತರ ಪ್ರಾಥಮಿಕ ಸಂಪರ್ಕಿತರು ಹಾಗೂ ಎರಡನೇ ಹಂತದ ಸಂಪರ್ಕಿತರ ನಿಗಾಇರಿಸಬೇಕಿದೆ.
1,28,000ರಷ್ಟು ಬೃಹತ್ ಸಂಖ್ಯೆಯ ಪ್ರಯಾಣಿಕರ ಕ್ವಾರಂಟೈನ್ ಅವಧಿಯ ಮೊದಲ ಹಂತ ಮುಕ್ತಾಯವಾಗುತ್ತಿದೆ. ಅವರಲ್ಲಿ ಮತ್ಯಾರಿಗೂ ಸೋಂಕು ಕಾಣಿಸಿಕೊಳ್ಳದೇ ಕೊರೊನಾ ಕುಣಿಕೆಗೆ ಸಿಲುಕದೇ ಪಾರಾಗಿರುವುದಕ್ಕೆ ಆರೋಗ್ಯ ಇಲಾಖೆ ನಿಟ್ಟುಸಿರುವ ಬಿಟ್ಟಿದೆ. ಬಹು ದೊಡ್ಡ ಸವಾಲಿನೊಂದಿಗೆ ಹೋಂ ಕ್ವಾರಂಟೈನ್ ನಿಗಾವಹಿಸಿರುವ ಆರೋಗ್ಯ ಇಲಾಖೆಗೆ ಒಂದು ಹಂತದ ಜಯ ಸಿಕ್ಕಿದೆ ಎನ್ನಬಹುದಾಗಿದೆ. ವಿಮಾನಗಳ ಹಾರಾಟ ಸ್ಥಗಿತಗೊಂಡಿದ್ದರೂ ಕಡಲ ತೀರದ ಬಂದರುಗಳಲ್ಲಿ ಹೊಸದಾಗಿ 400-450 ವಿದೇಶಿ ಪ್ರಯಾಣಿಕರ ತಪಾಸಣೆ ನಡೆಸಲಾಗಿದೆ. ಅವರನ್ನೂ ಹೋಂ ಕ್ವಾರಂಟೈನ್‌ನಲ್ಲಿರಿಸಲಾಗಿದೆ. ಅವರ ಮೇಲೂ ಆರೋಗ್ಯ ಇಲಾಖೆ ಹೆಚ್ಚಿನ ನಿಗಾ ಇರಿಸಿದೆ.
ದೆಹಲಿ ಘಟನೆ ಆಗದೇ ಇದ್ದಲ್ಲಿ ಕೊರೊನಾ ಬಹುತೇಕ ಒಂದು ಹಂತದ ನಿಯಂತ್ರಣಕ್ಕೆ ಬರುತ್ತಿತ್ತು ಎನ್ನುವ ಮಾತುಗಳು ಕೇಳಿ ಬರುತ್ತಿದೆ. ವಿದೇಶದಿಂದ ಬಂದವರಿಂದ ಹೊಸದಾಗಿ ಸೋಂಕು ಹರಡುವುದು ಬಹುತೇಕ ನಿಲ್ಲಲಿದೆ ಎನ್ನುವ ಮಾಹಿತಿ ಆರೋಗ್ಯ ಇಲಾಖೆ ಮೂಲಗಳಿಂದ ತಿಳಿದು ಬಂದಿದೆ. ಇನ್ನೆರಡು ವಾರದ ಲಾಕ್‌ಡೌನ್‌ನ ಪರಿಣಾಮಕಾರಿಯಾಗಿ ಜಾರಿಯಾಗುವಂತೆ ನೋಡಿಕೊಂಡಲ್ಲಿ ಕೋವಿಡ್-19 ಸೋಂಕು ಹರಡುವುದನ್ನು ಬಹುತೇಕ ನಿಯಂತ್ರಿಸಬಹುದಾಗಿದೆ ಎನ್ನುವ ಮಾಹಿತಿಯನ್ನು ಆರೋಗ್ಯ ಇಲಾಖೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ರವಾನಿಸಿದೆ. ಹಾಗಾಗಿ ಇಂದಿನಿಂದ ಲಾಕ್‌ಡೌನ್‌ನ ಮತ್ತಷ್ಟು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.