ಬೆಂಗಳೂರು: ರಾಜ್ಯದಲ್ಲಿ ಅಂತ್ಯೋದಯ ಹಾಗೂ ಆದ್ಯತಾ ಬಿಪಿಎಲ್ ಪಡಿತರ ಚೀಟಿಗಳ ಸಂಖ್ಯೆ ಒಟ್ಟು 1.27 ಕೋಟಿ ಇದೆ ಎಂದು ಆಹಾರ ಸಚಿವ ಉಮೇಶ್ ಕತ್ತಿ ತಿಳಿಸಿದ್ದಾರೆ.
ವಿಧಾನ ಪರಿಷತ್ನಲ್ಲಿ ನಾಮನಿರ್ದೇಶಿತ ಕಾಂಗ್ರೆಸ್ ಸದಸ್ಯ ಪಿ.ಆರ್.ರಮೇಶ್ ಪ್ರಶ್ನೆಗೆ ಉತ್ತರಿಸಿದ ಅವರು, 2021ರ ಮಾಹಿತಿ ಮೂಲಗಳ ಪ್ರಕಾರ, ರಾಜ್ಯದಲ್ಲಿ ಅಂತ್ಯೋದಯ ಪಡಿತರ ಚೀಟಿ ಸಂಖ್ಯೆ 10,90,951 ಹಾಗೂ ಆದ್ಯತಾ ಪಡಿತರ ಚೀಟಿ ಸಂಖ್ಯೆ 1,16,83,545 ಇದ್ದು, ಒಟ್ಟು 1,27,74,496 ಚೀಟಿಗಳನ್ನು ರಾಜ್ಯದಲ್ಲಿ ವಿತರಿಸಲಾಗಿದೆ. ಇದು ಜಿಲ್ಲಾ, ತಾಲೂಕು ಹಾಗೂ ಗ್ರಾಮವಾರು ವಿವರವನ್ನು ಒಳಗೊಂಡ ಮಾಹಿತಿಯಾಗಿದೆ.
ಆದ್ಯತಾ ಪಡಿತರ ಚೀಟಿಗೆ ಪ್ರತಿ ತಿಂಗಳು ಸದಸ್ಯರಿಗೆ ತಲಾ 5 ಕೆಜಿ ಅಕ್ಕಿ ಹಾಗೂ ಪ್ರತಿ ಪಡಿತರ ಚೀಟಿಗೆ 2 ಕೆಜಿ ಗೋಧಿ ಮತ್ತು ಅಂತ್ಯೋದಯ ಪಡಿತರ ಚೀಟಿದಾರರಿಗೆ 35 ಕೆಜಿ ಅಕ್ಕಿ ಉಚಿತವಾಗಿ ನೀಡಲಾಗುತ್ತಿದೆ ಎಂದು ವಿವರಿಸಿದ್ದಾರೆ.
ವಿಶೇಷ ಎಂದರೆ ಇಲ್ಲಿ ಸಾಕಷ್ಟು ಪಡಿತರ ಚೀಟಿಗಳನ್ನು ರದ್ದುಪಡಿಸಲಾಗಿದೆ. ಸರ್ಕಾರಿ ನೌಕರರು ಹೊಂದಿದ್ದ ಪಡಿತರ ಚೀಟಿಗಳನ್ನು ರದ್ದುಪಡಿಸಲಾಗಿದೆ. ವಿವಿಧ ಮಾನದಂಡಗಳ ಅಡಿ ಆದ್ಯತಾ ಪಡಿತರ ಚೀಟಿ ಹಾಗೂ ಅಂತ್ಯೋದಯ ಪಡಿತರ ಚೀಟಿ ನೀಡಲಾಗುತ್ತಿದೆ ಎಂದು ಅವರು ಅದರ ವಿವರವನ್ನು ಸವಿಸ್ತಾರವಾಗಿ ನೀಡಿದರು.
ರದ್ದಾದ ಪಡಿತರ ಚೀಟಿ:
ಸರ್ಕಾರವು ಅನರ್ಹ ಬಿಪಿಎಲ್ ಪಡಿತರ ಚೀಟಿಗಳನ್ನು ನಿರಂತರವಾಗಿ ಪತ್ತೆ ಹಚ್ಚಿ ಅಂತಹ ಪಡಿತರ ಚೀಟಿಗಳನ್ನು ರದ್ದುಪಡಿಸಿದೆ. ಕಳೆದ ಮೂರು ವರ್ಷಗಳಲ್ಲಿ 2,28,188 ಆದ್ಯತಾ ಬಿಪಿಎಲ್ ಅನರ್ಹ ಪಡಿತರ ಚೀಟಿ ಪತ್ತೆ ಹಚ್ಚಿ ರದ್ದುಪಡಿಸಲಾಗಿದೆ ಮತ್ತು 3,07,36,170 ರೂ. ದಂಡ ವಸೂಲಿ ಮಾಡಲಾಗಿದೆ. ಸುಳ್ಳು ಮಾಹಿತಿ ನೀಡಿ ಪಡಿತರ ಚೀಟಿ ಪಡೆದ ಕುಟುಂಬಗಳನ್ನು ಪತ್ತೆ ಹಚ್ಚಲು ಸರ್ಕಾರ ಹಲವು ಅಂಶಗಳ ಕ್ರಮ ಕೈಗೊಂಡಿದೆ ಎಂದು ಸಚಿವ ಉಮೇಶ್ ಕತ್ತಿ ಆ ವಿವರವನ್ನು ಕೂಡ ಪರಿಷತ್ಗೆ ನೀಡಿದರು.