ಬೆಂಗಳೂರು: ನಗರದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಇಂದೂ ಸಹ ನೂರರ ಗಡಿ ದಾಟಿದೆ. ಇಂದು 126 ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 1,398ಕ್ಕೆ ಏರಿಕೆಯಾಗಿದೆ.
ಈವರೆಗೆ ನಗರದಲ್ಲಿ ಒಟ್ಟು 411 ಮಂದಿ ಬಿಡುಗಡೆಯಾಗಿದ್ದು, 919 ಸಕ್ರಿಯ ಪ್ರಕರಣಗಳಿವೆ. ಇಂದೂ ಸಹ ಮೂವರು ಮೃತಪಟ್ಟಿದ್ದು, ಮರಣ ಪ್ರಮಾಣ 67 ಕ್ಕೆ ಏರಿಕೆಯಾಗಿದೆ. ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ 38 ವರ್ಷದ ಮಹಿಳೆ, 45 ವರ್ಷದ ಪುರುಷ ಹಾಗೂ 70 ವರ್ಷದ ವ್ಯಕ್ತಿ ಇಂದು ಮೃತಪಟ್ಟವರು. 126 ಸೋಂಕಿತರ ಪೈಕಿ ಇನ್ನೂ ಬಹುತೇಕ ಪ್ರಕರಣಗಳ ಸಂಪರ್ಕ ಪತ್ತೆಹಚ್ಚಲಾಗುತ್ತಿದ್ದು, ಇನ್ನು ಹಲವು ರೋಗಿಗಳು ಸೋಂಕಿನ ಲಕ್ಷಣದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. 126 ಪಾಸಿಟಿವ್ ಪ್ರಕರಣಗಳ ಪೈಕಿ, 37 ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಯವರಾಗಿದ್ದಾರೆ.
ಜೂನ್ ತಿಂಗಳೊಂದರಲ್ಲೇ 1,019 ಪಾಸಿಟಿವ್ ಪ್ರಕರಣ: ವಾರ್ ರೂಂ ವರದಿಯಂತೆ ನಗರದಲ್ಲಿ ಮೇ ಅಂತ್ಯದ ವರೆಗೆ 386 ಇದ್ದ ಪ್ರಕರಣ ಜೂನ್ನಲ್ಲಿ 1,405 ಕ್ಕೆ ಏರಿಕೆಯಾಗಿದೆ. ಜೂನ್ 1 ರಿಂದ 22 ರವರೆಗೆ 1019 ಹೊಸ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಮೇ ತಿಂಗಳಾಂತ್ಯಕ್ಕೆ 176 ಸಕ್ರೀಯ ಪ್ರಕರಣಗಳಿದ್ದವು, ಆದರೆ ಜೂನ್ನಲ್ಲಿ 962 ಪ್ರಕರಣಗಳಿವೆ. ಮೇ ಅಂತ್ಯದವರೆಗೆ 184 ಮಂದಿ ಗುಣಮುಖರಾಗಿದ್ದರೆ, ಜೂನ್ 22 ದಿನದಲ್ಲಿ 194 ಮಂದಿ ಗುಣಮುಖರಾಗಿದ್ದಾರೆ. ಮರಣ ಪ್ರಮಾಣ ಕೂಡಾ ಶೇಕಡಾ 3.26 ದಿಂದ 5.2 ಕ್ಕೆ ಏರಿಕೆಯಾಗಿದೆ. ಕಂಟೈನ್ಮೆಂಟ್ ಪ್ರದೇಶಗಳು 63 ರಿಂದ 338 ಕ್ಕೆ ಏರಿಕೆಯಾಗಿದೆ.
- ನಗರದಲ್ಲಿ ಈವರೆಗೆ ನಡೆಸಿದ ಸೋಂಕು ಪರೀಕ್ಷೆ -77,409
- ಒಟ್ಟು ಕಂಟೈನ್ಮೆಂಟ್ ಪ್ರದೇಶ- 484
- ಆ್ಯಕ್ಟಿವ್ ಕಂಟೈನ್ಮೆಂಟ್ ಪ್ರದೇಶ- 440
- ಜುಲೈ 17 ರವರೆಗೂ ಕಂಟೈನ್ಮೆಂಟ್ ಮುಂದುವರಿಯಲಿದೆ.
- ಸಕ್ರಿಯ ಕೋವಿಡ್ ಪ್ರಕರಣಗಳು- 73%
- ಗುಣಮುಖ ಪ್ರಮಾಣ- 27%
- ಪಾಸಿಟಿವಿಟಿ ಪ್ರಮಾಣ- 1.81%