ಬೆಂಗಳೂರು : 108 ಸಿಬ್ಬಂದಿ ಬಾಕಿ ವೇತನ ಪಾವತಿಗೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಮುಷ್ಕರ ನಡೆಸದಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆರೋಗ್ಯ ವಾಹಿನಿ ಸಿಬ್ಬಂದಿಗಳಿಗೆ ಕರೆ ನೀಡಿದ್ದಾರೆ. ಸಚಿವರ ಸೂಚನೆಯ ಮೇರೆಗೆ 108 ಸಿಬ್ಬಂದಿಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಆರೋಗ್ಯ ಇಲಾಖೆ ಆಯುಕ್ತ ರಂದೀಪ್, ಬಾಕಿ ವೇತನದ ಮೊದಲ ಕಂತಿನ 14 ಕೋಟಿ ಬಿಡುಗಡೆಗೊಳಿಸಿದ್ದಾರೆ. ಉಳಿದ ಕಂತುಗಳನ್ನು ಶೀಘ್ರದಲ್ಲಿ ಪಾವತಿಸುವ ಭರವಸೆಯನ್ನೂ ನೀಡಿದ್ದಾರೆ.
ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳು ಸೇರಿದಂತೆ 108 ಸಿಬ್ಬಂದಿ ಜೊತೆ ಸೋಮವಾರ ಸಭೆ ನಡೆಸಲಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ವೇತನ ಬಾಕಿ ಇರುವ ಸಮಸ್ಯೆ ಪರಿಹರಿಸುವುದಾಗಿ ಹೇಳಿದ್ದಾರೆ. 108 ಸಿಬ್ಬಂದಿಗಳ ಸಮಸ್ಯೆಗಳನ್ನು ಆಲಿಸಲಿರುವ ಸಚಿವರು, ಅವರ ಬೇಡಿಕೆಗಳ ಬಗ್ಗೆಯೂ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ.
ಹಿಂದಿನ ಸರ್ಕಾರದ ಅವಧಿಯಲ್ಲಿ 108 ಗುತ್ತಿಗೆಯಲ್ಲಿ ಆದ ಎಡವಟ್ಟುಗಳಿಂದ ವೇತನ ಪಾವತಿಯಲ್ಲಿ ಸಮಸ್ಯೆ ಉಂಟಾಗಿದೆ. ಈ ಬಗ್ಗೆ ಈಗಾಗಲೇ ಸಿಎಂ ಜೊತೆ ಚರ್ಚಿಸಿದ್ದು, ಸಿಬ್ಬಂದಿ ವೇತನದ ಸಮಸ್ಯೆಯಾಗದಂತೆ ಕ್ರಮ ವಹಿಸುವ ಬಗ್ಗೆ ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದ ಆರೋಗ್ಯ ಸಚಿವ ಗುಂಡೂರಾವ್, ಬಾಕಿ ವೇತನ ಪಾವತಿಗೆ ಕ್ರಮ ಕೈಗೊಳ್ಳಲು ಸೂಚಿಸಿದ್ದರು.
40 ಕೋಟಿ ವೇತನ ಪಾವತಿ ಬಾಕಿಯಿದ್ದು, ಇಂದು ಮೊದಲ ಕಂತು 14 ಕೋಟಿ ಬಿಡುಗಡೆಗೊಳಿಸಲಾಗಿದೆ. ಸೋಮವಾರ ಸಂಜೆಯೊಳಗೆ ಉಳಿದ ಬಾಕಿ ವೇತನ ಪಾವತಿಗೆ ಕ್ರಮ ವಹಿಸುವುದಾಗಿ ಆಯುಕ್ತ ರಂದೀಪ್ ಸಿಬ್ಬಂದಿಗಳಿಗೆ ಭರವಸೆ ನೀಡಿದ್ದಾರೆ. ಆರೋಗ್ಯ ಸಚಿವರು ಸಿಬ್ಬಂದಿಗಳ ಜೊತೆ ಸಭೆ ನಡೆಸುವ ಭರವಸೆ ಸಿಕ್ಕ ಹಿನ್ನೆಲೆಯಲ್ಲಿ ಮುಷ್ಕರ ನಡೆಸದಿರಲು 108 ಸಿಬ್ಬಂದಿಗಳು ನಿರ್ಧರಿಸಿದ್ದಾರೆ. ಶೇ 15 ರಷ್ಟು ವೇತನ ಹೆಚ್ಚಳಕ್ಕೆ ಸಿಬ್ಬಂದಿಗಳು ಬೇಡಿಕೆಯಿಟ್ಟಿದ್ದು, ಈ ಬಗ್ಗೆಯೂ ಆರೋಗ್ಯ ಸಚಿವರು ಚರ್ಚಿಸಲಿದ್ದಾರೆ ಎಂದು ಆರೋಗ್ಯ ಆಯುಕ್ತ ರಂದೀಪ್ ಸಿಬ್ಬಂದಿಗಳಿಗೆ ತಿಳಿಸಿದ್ದಾರೆ.
ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಆರೋಗ್ಯ ಸಚಿವ ಭೇಟಿ ನೀಡಿ ಪರಿಶೀಲನೆ: ಬೆಳ್ತಂಗಡಿ ತಾಲೂಕಿನ ಸರಕಾರಿ ಆಸ್ಪತ್ರೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ದ.ಕ.ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಇಂದು ಭೇಟಿ ನೀಡಿದರು. ವಾರ್ಡ್, ತೀವ್ರ ನಿಗಾ ಘಟಕ, ಡಯಾಲಿಸಿಸ್, ಸ್ಕ್ಯಾನಿಂಗ್ ಕೇಂದ್ರ, ವಾರ್ಡ್ ಶೌಚಾಲಯವನ್ನೂ ವೀಕ್ಷಿಸಿದರು. ಆ ಬಳಿಕ ರೋಗಿಗಳ ಜೊತೆ ಮಾತನಾಡಿದ ಸಚಿವರು, ಆಸ್ಪತ್ರೆಯ ಕುಂದುಕೊರತೆಗಳ ಬಗ್ಗೆ ವೈದ್ಯರು, ಡಿ ಹೆಚ್ಒ ಜೊತೆ ಚರ್ಚೆ ನಡೆಸಿದರು.
ಹಾಳಾದ ಉಪಕರಣಗಳು ರಿಪೇರಿಯಾಗಿಲ್ಲ, ಸ್ಕ್ಯಾನಿಂಗ್ ಉಪಕರಣ ಹಾಳಾಗಿರುವುದರಿಂದ ಹೊಸ ಮಷಿನ್ ಖರೀದಿಸಲು ತಿಳಿಸಿದ್ದೇವೆ. ಡಯಾಲಿಸಿಸ್ ಕೇಂದ್ರಕ್ಕೂ ಹೊಸ ಉಪಕರಣ ತರಲಾಗುತ್ತದೆ. ಬಿಪಿಎಲ್ ಕಾರ್ಡ್ ದಾರರು ಆಸ್ಪತ್ರೆಗೆ ಬಂದಾಗ ಉಚಿತ ಜೌಷಧ ನೀಡಬೇಕು, ಹೆರಿಗೆಗೆ ಬರುವವರ ಸಂಖ್ಯೆ ಕಡಿಮೆ ಇದೆ. ಉತ್ತಮವಾಗಿ ಆಸ್ಪತ್ರೆ ನಡೆಯಬೇಕು. ಹಾಳಾದ ವೈದ್ಯಕೀಯ ಉಪಕರಣಗಳನ್ನು 2 ದಿನದೊಳಗೆ ಸರಿಪಡಿಸಬೇಕು ಎಂದು ಡಿಹೆಚ್‌ಒಗೆ ಸಚಿವ ದಿನೇಶ್ ಗುಂಡೂರಾವ್ ಸೂಚಿಸಿದರು.
ಇದೇ ವೇಳೆ ಎಂಬಿಬಿಎಸ್ ವೈದ್ಯರನ್ನು ಸರ್ಕಾರಿ ಆಸ್ಪತ್ರೆಗೆ ನಿಯೋಜಿಸುವ ನಿರ್ಧಾರದ ಬಗ್ಗೆ ಪ್ರಸ್ತಾಪಿಸಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಶಾಸಕ ಹರೀಶ್ ಕುಮಾರ್, ಮಾಜಿ ಶಾಸಕ ವಸಂತ ಬಂಗೇರ, ಕೆಪಿಸಿಸಿ ಕಾರ್ಯದರ್ಶಿ ರಕ್ಷಿತ್ ಶಿವರಾಂ ಉಪಸ್ಥಿತರಿದ್ದರು.
ಇದನ್ನೂಓದಿ : ಅಮರನಾಥ ಯಾತ್ರೆಯಲ್ಲಿ ಹವಾಮಾನ ವೈಪರೀತ್ಯ.. ಸಂಕಷ್ಟಕ್ಕೆ ಸಿಲುಕಿದ ಕನ್ನಡಿಗರು; ಅಗತ್ಯ ಕ್ರಮಕ್ಕೆ ಸಿಎಂ ಸೂಚನೆ