ಬೆಂಗಳೂರು: 2023ರಲ್ಲಿ ನೂರಕ್ಕೆ ನೂರು ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಬರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಡಾ ಬಿ ಆರ್ ಅಂಬೇಡ್ಕರ್ ಮಹಾಪರಿನಿರ್ವಾಣ ದಿನದ ಅಂಗವಾಗಿ ವಿಧಾನಸೌಧದ ಮುಂಭಾಗದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ಬಳಿಕ, ಎಕ್ಸಿಟ್ ಪೋಲ್ನಲ್ಲಿ ಬಿಜೆಪಿಗೆ ಮುನ್ನಡೆ ವಿಚಾರವಾಗಿ ಮಾತನಾಡಿದರು.
ರಾಜ್ಯದ ಜನರು ಅಭಿವೃದ್ಧಿ ಕಾರ್ಯವನ್ನು ಬೆಂಬಲಿಸಲಿದ್ದಾರೆ. ಜನ ಸುಳ್ಳು ಆರೋಪಗಳಿಗೆ ಮತ್ತು ರಾಜಕೀಯ ಪ್ರೇರಿತ ಆರೋಪಗಳಿಗೆ ಬೆಂಬಲ ಕೊಡುವುದಿಲ್ಲ. ಎರಡು ರಾಜ್ಯಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ನಾಯಕತ್ವಕ್ಕೆ ಇಡೀ ಭಾರತ ಬೆಂಬಲ ಕೊಡುತ್ತಿದೆ. ಗುಜರಾತ್ನಲ್ಲಿ ಇದು 7ನೇ ಬಾರಿ ನಡೆಯುತ್ತಿದೆ. ಮುಂಬರುವ ಚುನಾವಣೆಯಲ್ಲಿ ಕರ್ನಾಟಕದಲ್ಲೂ ಒಳ್ಳೆಯ ಪರಿಣಾಮ ಬೀರಲಿದೆ ಎಂದರು.
ಮಹಾರಾಷ್ಟ್ರ ಕನ್ನಡಿಗರ ರಕ್ಷಣೆಗೆ ಸಿದ್ಧ: ಮಹಾರಾಷ್ಟ್ರ ಗಡಿ ತಗಾದೆ ವಿಚಾರವಾಗಿ ಪ್ರತಿಕ್ರಿಯಿಸಿ, ಬಹಳ ವರ್ಷದಿಂದ ವಿವಾದ ಮಾಡಿಕೊಂಡು ಬಂದಿದ್ದಾರೆ. ಜನರ ನಡುವೆ ಸಾಮರಸ್ಯ ಇದೆ. ಸುಪ್ರೀಂ ಕೋರ್ಟ್ನಲ್ಲಿ ಕೇಸ್ ಇದೆ. ಗೆಲ್ಲುವ ವಿಶ್ವಾಸವಿದೆ. ಚುನಾವಣೆ ದೃಷ್ಟಿಯಲ್ಲಿ ವಿವಾದ ಎಬ್ಬಿಸುವುದಿಲ್ಲ. ಜನರ ರಕ್ಷಣೆಗೆ ನಾವು ಬದ್ಧವಾಗಿದ್ದೇವೆ. ಮಹಾರಾಷ್ಟ್ರದಲ್ಲಿರುವ ಕನ್ನಡಿಗರ ರಕ್ಷಣೆ ಮಾಡಲು ಸರ್ಕಾರ ಸಿದ್ಧವಾಗಿದೆ ಎಂದು ಸಿಎಂ ಅಭಯ ನೀಡಿದರು.
ಸುದೀರ್ಘ ಕಾಲ ಸಂವಿಧಾನ ಹೋರಾಟ ಮಾಡಿದವರು ಡಾ.ಬಿ ಆರ್ ಅಂಬೇಡ್ಕರ್. ಸಂವಿಧಾನ ಇಲ್ಲ ಅಂದಿದ್ದರೆ, ಇವತ್ತು ನಾವು ಇರುತ್ತಿರಲಿಲ್ಲ. ಸಂವಿಧಾನದಲ್ಲಿ ಮಾನವೀಯ ಮೌಲ್ಯಗಳನ್ನು ಅಳವಡಿಸಿದ್ದಾರೆ. ಅವರು ಅನುಭವಿಸಿರುವಂತ ನೋವು ಸಂವಿಧಾನದಲ್ಲಿ ಪ್ರತಿಫಲಿಸಿದೆ ಎಂದು ಹೇಳಿದರು.
ಸಂವಿಧಾನ ತತ್ವಗಳನ್ನು, ಅದರ ಮೌಲ್ಯಗಳನ್ನು ನಾವು ಅಳವಡಿಸಿಕೊಳ್ಳಬೇಕು. ಎಸ್ಸಿ, ಎಸ್ಟಿ ಮಕ್ಕಳಿಗೆ ಹಚ್ಚಿನ ಮೀಸಲಾತಿ ನೀಡುವಂತಹ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತದೆ. ಎಸ್ಸಿ ಎಸ್ಟಿ ಹೆಣ್ಣುಮಕ್ಕಳಿಗೆ ಹೆಚ್ಚಿನ ಹಾಸ್ಟೆಲ್ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಅವರ ಶಿಕ್ಷಣಕ್ಕೂ ಅನುದಾನ ನೀಡಲಾಗುತ್ತದೆ ಎಂದರು.
ಸಿಎಂ ಬೊಮ್ಮಾಯಿಗೆ ಪ್ರತಿಭಟನೆಯ ಬಿಸಿ: ಇದೇ ವೇಳೆ ಸಿಎಂಗೆ ಪ್ರತಿಭಟನೆ ಬಿಸಿ ತಟ್ಟಿದೆ. ಜಂಬೂದ್ವೀಪ ಜನಸೇವೆ ಸಂಘಟನೆವರು ಪ್ರತಿಭಟನೆ ನಡೆಸಿದ್ದಾರೆ. ಪಿಟಿಸಿಎಲ್ ಕಾಯ್ದೆ ತಿದ್ದುಪಡಿ ಹಾಗೂ ಸದಾಶಿವ ಆಯೋಗ ವರದಿ ಅನ್ವಯ ಮಾದಿಗ ಸಮಾಜಕ್ಕೆ ಶೇ.6 ಪ್ರತ್ಯೇಕ ಮೀಸಲಾತಿ ನೀಡುವಂತೆ ಆಗ್ರಹಿಸಿದರು.
ಇದನ್ನೂ ಓದಿ: ಭಾರತೀಯ ಕ್ರಿಕೆಟ್ನಲ್ಲೂ ಎಸ್ಸಿ-ಎಸ್ಟಿಗೆ ಮೀಸಲಾತಿ ನೀಡಬೇಕು : ನಟ ಚೇತನ್