ಬೆಂಗಳೂರು: ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ಪತನವಾಗಿ 1 ವರ್ಷವಾಗುತ್ತಿರುವ ಹಿನ್ನೆಲೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪರ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಕುಮಾರಸ್ವಾಮಿ ಸಿಎಂ ಆಗಬೇಕೆಂಬ ಪೋಸ್ಟ್‌ಗಳು ಹರಿದಾಡುತ್ತಿವೆ.
ಕುಮಾರಸ್ವಾಮಿ ಸಿಎಂ ಆಗಿ ಬಳಿಕ ಅಧಿಕಾರ ಕಳೆದುಕೊಂಡು ವರ್ಷ ತುಂಬಿದ ಕಾರಣ, ಅವರು ಜಾರಿ ಮಾಡಿರುವ ಜನಪರ ಕಾರ್ಯಕ್ರಮಗಳನ್ನು ಜೆಡಿಎಸ್ ಕಾರ್ಯಕರ್ತರು ಪೋಸ್ಟ್ ಮಾಡುತ್ತಿದ್ದಾರೆ. ಅಲ್ಲದೇ. ಜು.22ಕ್ಕೆ ಕುಮಾರಣ್ಣನಿಗೆ ಮೋಸ ಮಾಡಿ ಒಂದು ವರ್ಷ, ಮತ್ತೊಮ್ಮೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಬೇಕು ಎಂದು ಪಕ್ಷದ ಕಾರ್ಯಕರ್ತರು ಅಭಿಯಾನವನ್ನು ಆರಂಭಿಸಿದ್ದಾರೆ.
ಮೆಟ್ರೋ ಕನಸು ಕಂಡದ್ದು ಶಂಕ್ರಣ್ಣ, ಅದನ್ನು ನನಸು ಮಾಡಿದ್ದು ಕುಮಾರಣ್ಣ ಎಂದು ಪೋಸ್ಟ್‌ಗಳಲ್ಲಿ ಅಭಿಮಾನದ ನುಡಿಗಳನ್ನು ಬರೆದು ಪೋಸ್ಟ್ ಮಾಡಲಾಗಿದೆ. ಅಲ್ಲದೆ ಜನತಾ ದರ್ಶನದಲ್ಲಿ 23 ಸಾವಿರಕ್ಕೂ ಹೆಚ್ಚು ಅಹವಾಲು ಸ್ವೀಕಾರ, ಶೇ.50 ರಷ್ಟು ಇತ್ಯರ್ಥ. ಫೆರಿಫೆರಲ್ ವರ್ತುಲ ರಸ್ತೆ ನಿರ್ಮಾಣಕ್ಕೆ ಪುನರ್ ಚಾಲನೆ, ಆಧುನಿಕ ಕೃಷಿ ಪದ್ಧತಿಗೆ ಆದ್ಯತೆ (ಇಸ್ರೆಲ್ ಮಾದರಿ) ಸೇರಿದಂತೆ ರೈತರಿಗೆ, ಶಿಕ್ಷಣ ಕ್ಷೇತ್ರಕ್ಕೆ, ಆರೋಗ್ಯ ಕ್ಷೇತ್ರ ಹಾಗೂ ಇತರೆ ವಲಯಗಳಿಗೆ ನೀಡಿದ ಕೊಡುಗೆಗಳ ವಿವರಗಳನ್ನೊಳಗೊಂಡ ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಮೈತ್ರಿ ಪಕ್ಷದ ಸದಸ್ಯರನ್ನು ಸೆಳೆದು ಬಿಜೆಪಿ ಸರ್ಕಾರ ರಚನೆ ಮಾಡಲಾಗಿದೆ. ಸರ್ಕಾರ ರಚನೆಯಾಗಿ ಒಂದು ವರ್ಷದ ಸಂಭ್ರಮದಲ್ಲಿ ಬಿಜೆಪಿ ಇದ್ದರೆ, ಮೈತ್ರಿ ಸರ್ಕಾರ ಪತನವಾಗಿ ಜು.22ಕ್ಕೆ ಒಂದು ವರ್ಷವಾಗಲಿದೆ. ಹೀಗಾಗಿ ಬಿಜೆಪಿ ವಿರುದ್ಧ ಪರೋಕ್ಷವಾಗಿ ಜೆಡಿಎಸ್ ಕಾರ್ಯಕರ್ತರು ಈ ರೀತಿಯ ಪೋಸ್ಟ್‌ಗಳನ್ನು ಹಾಕುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.