ಬೆಂಗಳೂರು: ಕೊರೊನಾ ಅಟ್ಟಹಾಸದ ನಡುವೆ ಚಿಕಿತ್ಸೆ ಸಿಗದೆ ಒಂದು ತಿಂಗಳ ಹಸುಗೂಸು ಜೀವ ಬಿಟ್ಟಿರುವ ಮನಕಲಕುವ ಘಟನೆ ಮಂಜುನಾಥ ನಗರದಲ್ಲಿ ನಡೆದಿದೆ.
ಜುಲೈ 11ರಂದು ಮಗುವಿಗೆ ಅನಾರೋಗ್ಯ ಕಾಡಿತ್ತು. ಭಾನುವಾರ ಬೆಳಗ್ಗೆಯಿಂದ ತಂದೆ ವೆಂಕಟೇಶ್ ಮತ್ತು ತಾಯಿ ರಶ್ಮಿ ಮಗುವಿನ ಚಿಕಿತ್ಸೆಗಾಗಿ ನಗರದಲ್ಲಿ ಅಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿದ್ದರು. ಆದರೆ ಮಗುವಿಗೆ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ಸೋಮವಾರ ಸಂಜೆ ಮಗು ಪ್ರಾಣಬಿಟ್ಟಿದೆ. ಇನ್ನು ಮಗುವನ್ನು ಕಳೆದುಕೊಂಡ ವೆಂಕಟೇಶ್ ಆಸ್ಪತ್ರೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಗುವಿನ ಚಿಕಿತ್ಸೆಗಾಗಿ ನಗರದಲ್ಲಿ 200 ಕಿಲೋ ಮೀಟರ್ ಓಡಾಡಿದ್ರು ಪ್ರಯೊಜನವಾಗಿಲ್ಲ. ಕಾಲಿಗೆ ಬಿದ್ದು, ಅಂಗಲಾಚಿ್ದರೂ ಯಾವ ಆಸ್ಪತ್ರೆಯಲ್ಲಿಯೂ ಮಗುವಿಗೆ ಚಿಕಿತ್ಸೆ ನೀಡಲಿಲ್ಲ. ಅಲ್ಲದೆ ಹಲವು ಆಸ್ಪತ್ರೆಯಲ್ಲಿ ಮಗುವನ್ನು ಸೇರಿಸಿಕೊಳ್ಳದೆ ಬೇಜವಾವ್ದಾರಿ ತೋರಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.
ಕೊರೊನಾ ಇಲ್ಲ ಎಂದರೂ ಸೇರಿಸಿಕೊಳ್ಳಲು ಹಿಂದೇಟು ಹಾಕಿದರು. 10 ಆಸ್ಪತ್ರೆಗಳಿಗೆ ತಿರುಗಿದರೂ ಸರಿಯಾಗಿ ಚಿಕಿತ್ಸೆ ಸಿಗದೇ ಪರದಾಡಿ, ಕೊನೆಗೆ ಮಾರತಹಳ್ಳಿಯ ರೈನ್ಬೋ ಮಕ್ಕಳ ಆಸ್ಪತ್ರೆಗೆ ದಾಖಲಿಸಿದ ಮಾಡಿದ ನಂತರ ಸೋಮವಾರ ಸಂಜೆ ಮಗು ಸಾವನ್ನಪ್ಪಿದೆ ಎಂದು ಮಗುವಿನ ತಂದೆ ವೆಂಕಟೇಶ ನೋವು ತೋಡಿಕೊಂಡಿದ್ದಾರೆ.
ಮಗುವಿಗೆ ಸರಿಯಾಗಿ ಯಾರೂ ಚಿಕಿತ್ಸೆ ನೀಡಲಿಲ್ಲ. ಕೊರೊನಾ ನಡುವೆ ಯಾವ ರೋಗಿಯನ್ನೂ ಸರಿಯಾಗಿ ನೋಡುತ್ತಿಲ್ಲ. ಕೆಲ ಖಾಸಗಿ ಆಸ್ಪತ್ರೆಗಳು ಬಡವರ ರಕ್ತ ಹೀರುತ್ತಿವೆ. ನನ್ನ ಮಗುವಿನ ಹಾಗೆ ಇನ್ಯಾರಿಗೂ ಇಂತಹ ಸ್ಥಿತಿ ಬರಬಾರದು ಎಂದು ವೆಂಕಟೇಶ ಹೇಳಿದರು.