ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಮತದಾರರನ್ನು ಓಲೈಸಲು ರಾಜಕೀಯ ಪಕ್ಷಗಳು ವಾಮಮಾರ್ಗ ಬಳಸುತ್ತಿವೆ. ಇದಕ್ಕೆ ಕಡಿವಾಣ ಹಾಕಲು ನಗರದೆಲ್ಲೆಡೆ ಚೆಕ್ ಪೋಸ್ಟ್ ನಿರ್ಮಿಸಲಾಗಿದ್ದು ಇಂದು ಎಸ್ಜೆ ಪಾರ್ಕ್ ಪೊಲೀಸರು ಪರಿಶೀಲನೆ ನಡೆಸುವಾಗ ಕೆಟ್ಟು ನಿಂತ ಆಟೋದಲ್ಲಿ ದಾಖಲೆ ಇಲ್ಲದ ಒಂದು ಕೋಟಿ ರೂಪಾಯಿ ನಗದು ಪತ್ತೆಯಾಗಿದೆ.
500 ರೂಪಾಯಿ ಮುಖಬೆಲೆಯ 1 ಕೋಟಿ ರೂಪಾಯಿ ನಗದು ದೊರೆತಿದ್ದು, ಆಟೋದಲ್ಲಿ ಹಣ ಸಾಗಿಸುತ್ತಿದ್ದ ಪ್ರವೀಣ್ ಹಾಗೂ ಸುರೇಶ್ ಎಂಬುವರನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇಬ್ಬರು ವ್ಯಕ್ತಿಗಳು ಆಟೋದಲ್ಲಿ ಎಸ್ಜೆ ಪಾರ್ಕ್ನ ಕಾಳಿಂಗರಾವ್ ಬಸ್ ನಿಲ್ದಾಣದ ಬಳಿ ಬರುವಾಗ ಆಟೋ ಕೆಟ್ಟು ನಿಂತಿದೆ. ಅದೇ ಸ್ಥಳದಲ್ಲಿ ಹಾಕಲಾಗಿದ್ದ ಚೆಕ್ ಪೋಸ್ಟ್ನಲ್ಲಿದ್ದ ಪೊಲೀಸ್ ಸಿಬ್ಬಂದಿ ಅನುಮಾನಗೊಂಡು ಪರಿಶೀಲಿಸಿದಾಗ ಕೋಟ್ಯಂತರ ರೂಪಾಯಿ ಹಣ ಸಿಕ್ಕಿದೆ.
ಯಾವುದೇ ದಾಖಲಾತಿಯಿಲ್ಲದೇ ಹಣ ಸಾಗಿಸುವುದನ್ನು ಗಮನಿಸಿ ಹಣ ಹಾಗೂ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಐಟಿ ಇಲಾಖೆಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಬಂದು ಪರಿಶೀಲಿಸಿದ್ದಾರೆ. ಈ ಹಣ ರಾಜೇಶ್ ಎಂಟರ್ಪ್ರೈಸಸ್ಗೆ ಸೇರಿದ್ದು ಜಯನಗರದಿಂದ ವಿಜಯನಗರಕ್ಕೆ ಹಣ ಕೊಂಡ್ಯೊಯುತ್ತಿರುವುದಾಗಿ ಆರೋಪಿಗಳು ಹೇಳಿಕೆ ನೀಡಿದ್ದಾರೆ. ಇದರ ಸತ್ಯಾಸತ್ಯತೆ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಬೀದರ್:1.40 ಕೋಟಿ ರೂಪಾಯಿ ಮೌಲ್ಯದ 150 ಕೆಜಿ ಗಾಂಜಾ ವಶ
ಚುನಾವಣಾ ಅಕ್ರಮ: ಚುನಾವಣೆಯ ವಿವಿಧ ಜಾಗೃತ ದಳಗಳಿಂದ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ಮಾದರಿ ನೀತಿ ಸಂಹಿತೆ, ಚುನಾವಣಾ ವೆಚ್ಚ ಹಾಗೂ ಕಾನೂನು ಮತ್ತು ಸುವ್ಯವಸ್ಥೆಯನ್ನು ಉಲ್ಲಂಘಿಸಿರುವ ಕುರಿತು ಏ.12ರವರೆಗಿನ ಅಂಕಿಅಂಶ ಗಮನಿಸಿದಾಗ ವಿಚಕ್ಷಣ ದಳ, ಸ್ಥಿರ ಕಣ್ಗಾವಲು ತಂಡಗಳು, ಪೊಲೀಸ್ ಮತ್ತು ಆದಾಯ ತೆರಿಗೆ ಅಧಿಕಾರಿಗಳು ಸೇರಿ ಒಟ್ಟು 55,06,70,204ರೂ. ನಗದು ವಶಪಡಿಸಿಕೊಂಡಿವೆ.
ವಿಚಕ್ಷಣ ದಳ, ಸ್ಥಿರ ಕಣ್ಗಾವಲು ತಂಡಗಳು, ಪೊಲೀಸ್ ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳು ಸೇರಿ 30,23,28,775 ರೂ. ಮೌಲ್ಯದ 6,55,738 ಲೀಟರ್ ಮದ್ಯ ವಶಪಡಿಸಿಕೊಂಡಿವೆ. 13,06,84,276/- ಮೌಲ್ಯದ 558.30 ಕೆ.ಜಿ ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡಿವೆ. ಬಾಳುವ ಲೋಹಗಳನ್ನು ಗಮನಿಸಿದರೆ 53.28 ಕೆಜಿ ತೂಕದ ಚಿನ್ನ ವಶಪಡಿಸಿಕೊಂಡಿದ್ದು ಇದರ ಮೌಲ್ಯ 21,27,39,747 ರೂ. ವಶಪಡಿಸಿಕೊಳ್ಳಲಾಗಿದೆ. 427.07 ಕೆಜಿ ಮೌಲ್ಯದ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದು ಇದರ ಮೊತ್ತ 23,83,22,844 ರೂ. ಆಗಿದೆ.
ಇದನ್ನೂ ಓದಿ: ಬಾಗಲಕೋಟೆ: ಹುನ್ನೂರ ಚೆಕ್ಪೋಸ್ಟ್ನಲ್ಲಿ ದಾಖಲೆ ಇಲ್ಲದ 2.10 ಕೋಟಿ ರೂ. ಜಪ್ತಿ