ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನದ ಮೃಗಾಲಯದಲ್ಲಿ ಗಂಡು ಝೀಬ್ರಾ ಸಾವನ್ನಪ್ಪಿದೆ.
ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಹೊಟ್ಟೆಯೂತದ ನೋವಿನಿಂದ ಸಾವನ್ನಪ್ಪಿದೆ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆಯಾದರೂ ನಿಖರ ಕಾರಣ ತಿಳಿದುಬಂದಿಲ್ಲ. ಈಗ ಸಾವನ್ನಪ್ಪಿರುವ ಆರು ವರ್ಷದ ಪೃಥ್ವಿ ಎಂಬ ಹೆಸರಿನ ಝೀಬ್ರಾದೊಂದಿಗೆ ಮೂರು ಝೀಬ್ರಾಗಳನ್ನು ಇಸ್ರೇಲ್ನ ರಾಮತ್ಗನ್ (ಸಫಾರಿ)ಟೆಲಿ ಅವಿಲ್ ಮೃಗಾಲಯ ಕೇಂದ್ರದಿಂದ 26ನೇ ನವೆಂಬರ್ 2015ರಂದು ಪ್ರಾಣಿಗಳ ವಿನಿಮಯ ಯೋಜನೆಯಡಿ ಬನ್ನೇರುಘಟ್ಟ ಮೃಗಾಲಯಕ್ಕೆ ತರಲಾಗಿತ್ತು.
ಈ ಹಿಂದೆಯೂ ಕೂಡ ಆವರಣದಲ್ಲಿ ಅಗೆಯಲಾಗಿದ್ದ ಹಳ್ಳಕ್ಕೆ ಬಿದ್ದು ಗರ್ಬಿಣಿ ಹೆಣ್ಣು ಝೀಬ್ರಾವೊಂದು ಸಾವನ್ನಪ್ಪಿತ್ತು. ಈಗ ಎರಡು ಝೀಬ್ರಾ ಕಳೆದುಕೊಂಡಿರುವ ಮೃಗಾಲಯದಲ್ಲಿ ಒಂದು ಮರಿ ಸೇರಿ ಮೂರು ಝೀಬ್ರಾಗಳು ಉಳಿದಿವೆ ಎಂದು ಉಪ ನಿರ್ದೇಶಕ ಕುಶಾಲಪ್ಪ ತಿಳಿಸಿದ್ದಾರೆ.