ಬೆಂಗಳೂರು : ‘ಯುವರತ್ನ’ ಚಿತ್ರತಂಡವು ಸಿನಿಮಾ ಪ್ರಚಾರದ ವೇಳೆ ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದ ಹಿನ್ನೆಲೆಯಲ್ಲಿ 20 ಸಾವಿರ ರೂ. ದಂಡ ವಿಧಿಸಲಾಗಿದೆ ಎಂದು ಸರ್ಕಾರ ಹೈಕೋರ್ಟ್ಗೆ ಮಾಹಿತಿ ನೀಡಿದೆ.
ರಾಜ್ಯದಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಲೆಟ್ಜ್ ಕಿಟ್ ಫೌಂಡೇಷನ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ, ಸರ್ಕಾರದ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, 2021ರ ಮಾ.21ರಂದು ಬೆಳಗಾವಿ, ಹುಬ್ಬಳ್ಳಿ-ಧಾರವಾಡದಲ್ಲಿ ಯುವರತ್ನ ಚಿತ್ರ ತಂಡ ಪ್ರಚಾರ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಈ ವೇಳೆ, ಭಾಗವಹಿಸಿದ್ದವರಲ್ಲಿ ಯಾರೊಬ್ಬರೂ ಮಾಸ್ಕ್ ಧರಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಪೊಲೀಸರು, ಚಿತ್ರ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲಂ ಪ್ರೋಡಕ್ಷನ್ ನಿಂದ 20 ಸಾವಿರ ರೂ. ದಂಡ ವಸೂಲಿ ಮಾಡಿದ್ದಾರೆ ಎಂದು ವಿವರಿಸಿದರು.
ಅಲ್ಲದೇ, ಮಾ.20ರಂದು ರಾಯಚೂರು ಜಿಲ್ಲೆಯ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷವು ರೋಡ್ ಶೋ ಆಯೋಜಿಸಿತ್ತು. ಅಲ್ಲಿನ ಬಸವೇಶ್ವರ ಸರ್ಕಲ್ ನಿಂದ ಪ್ರಚಾರ ಸಭೆ ನಡೆಯುವ ಸ್ಥಳದವರೆಗೆ ನಡೆದ ರ‍್ಯಾಲಿಯಲ್ಲಿ ಭಾಗವಹಿಸಿದ್ದ ಬಹಳಷ್ಟು ಜನರು ಮಾಸ್ಕ್ ಧರಿಸದೇ ಮಾರ್ಗಸೂಚಿ ಉಲ್ಲಂಘಿಸಿದ್ದರು. ಇದರಿಂದ ಸ್ಥಳೀಯ ಪೊಲೀಸರು 35 ಜನರ ವಿರುದ್ಧ ಕರ್ನಾಟಕ ಸಾಂಕ್ರಾಮಿಕ ರೋಗಳ ಕಾಯ್ದೆ ಅಡಿ 15 ಎಫ್‌ಐಆರ್ ದಾಖಲಿಸಿದ್ದಾರೆ. ಜತೆಗೆ, ಒಟ್ಟು 67,700 ರೂ ದಂಡ ವಸೂಲಿ ಮಾಡಿದ್ದಾರೆ ಎಂದು ತಿಳಿಸಿದರು.
ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ ಪೀಠ, ಸಭೆ-ಸಮಾರಂಭಗಳಲ್ಲಿ ಕೋವಿಡ್ ಮಾರ್ಗಸೂಚಿಗಳು ಉಲ್ಲಂಘನೆಯಾದ ವೇಳೆ ಆಯೋಜಕರಿಗೆ ಮಾತ್ರ ದಂಡ ವಿಧಿಸಲಾಗಿದೆ. ಆದರೆ, ಸಮಾವೇಶದಲ್ಲಿ ಭಾಗವಹಿಸಿ ನಿಯಮ ಉಲ್ಲಂಘಿಸಿದವರಿಂದ ಏಕೆ ದಂಡ ವಸೂಲಿ ಮಾಡಿಲ್ಲ ಎಂದು ಪ್ರಶ್ನಿಸಿತು. ಅಲ್ಲದೇ, ಆಯೋಜಕರಿಗೆ ಮಾತ್ರವಲ್ಲದೇ ಭಾಗವಹಿಸಿದವರ ಪೈಕಿ ಮಾಸ್ಕ್ ಧರಿಸದೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಕೊರೋನಾ ಮಾರ್ಗಸೂಚಿ ಉಲ್ಲಂಘಿಸಿದವರಿಗೂ ದಂಡ ವಿಧಿಸಬೇಕು. ಈ ವಿಚಾರವಾಗಿ ಏ.12ರಂದು ಮಧ್ಯಂತರ ಆದೇಶ ಹೊರಡಿಸಲಾಗುತ್ತದೆ ಎಂದು ತಿಳಿಸಿ ವಿಚಾರಣೆ ಮುಂದೂಡಿತು.
ಇದನ್ನೂ ಓದಿ: ಹೊಸಪೇಟೆಯಲ್ಲಿ ಸಿಲಿಂಡರ್ ಸ್ಫೋಟ.. ತಂದೆ-ಮಗಳು ಸಜೀವ ದಹನ