ದೇವನಹಳ್ಳಿ: ಬಯಲುಸೀಮೆಯ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಮತ್ತು ತುಮಕೂರು ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಎತ್ತಿನಹೊಳೆ ಯೋಜನೆ 2024ಕ್ಕೆ ಪೂರ್ಣಗೊಳ್ಳಲಿದೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಬಿ.ಎನ್.ಬಚ್ಚೇಗೌಡ ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಮೇಲ್ವಿಚಾರಣೆ ಸಮಿತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, 2014ರಲ್ಲಿ ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ಸಿಕ್ಕ ಎತ್ತಿನಹೊಳೆ ಯೋಜನೆ ಕುಂಟುತ್ತಲೇ ಸಾಗಿದೆ. ಕಾಮಗಾರಿ ವಿಳಂಬದಿಂದ ಯೋಜನೆಯ ಹಣ ದುಪ್ಪಟ್ಟುಗೊಂಡಿದೆ. ಯೋಜನೆಗೆ ನಿಗದಿಯಾದ ಹಣ 12,912 ಕೋಟಿ. ಈಗಾಗಲೇ ಯೋಜನೆಗಾಗಿ 12 ಸಾವಿರ ಕೋಟಿ ಹಣ ಖರ್ಚಾಗಿದೆ. ಇನ್ನೂ 12 ಸಾವಿರ ಕೋಟಿ ಹಣ ಬೇಕಾಗಿದೆ. ಒಟ್ಟು 24,982 ಕೋಟಿ ಹಣ ಅಗತ್ಯವಿದೆ ಎಂದರು.
ಮೊದಲ ಹಂತದ ಕಾಮಾಗಾರಿ ಪೂರ್ಣಗೊಂಡಿದ್ದು, ದೊಡ್ಡಬಳ್ಳಾಪುರ ಮತ್ತು ಕೊರಟಗೆರೆ ತಾಲೂಕು ನಡುವಿನ ಬೈರಗೊಂಡ್ಲು ಬಳಿ ನೀರು ಸಂಗ್ರಹಕ್ಕಾಗಿ ಜಲಾಶಯ ನಿರ್ಮಾಣವಾಗಬೇಕಿದೆ. ಸುಮಾರು 5 ಸಾವಿರ ಎಕರೆ ರೈತರ ಜಮೀನು ಯೋಜನೆಗಾಗಿ ಸ್ವಾಧೀನ ಮಾಡಿಕೊಳ್ಳಬೇಕಾಗಿದೆ. ಇದಕ್ಕಾಗಿ ಕೊರಟಗೆರೆ ಭಾಗದ ರೈತರಿಗೆ ಸರ್ಕಾರಿ ಬೆಲೆಯ ನಾಲ್ಕು ಪಟ್ಟು ಹೆಚ್ಚು ಪರಿಹಾರ ಹಣ ನಿಗದಿ ಮಾಡಲಾಗಿದೆ. ಅದೇ ರೀತಿ ದೊಡ್ಡಬಳ್ಳಾಪುರ ತಾಲೂಕಿನ ಜಮೀನಿಗೆ 8 ಪಟ್ಟು ಪರಿಹಾರದ ಹಣ ನಿಗದಿ ಮಾಡಲಾಗಿದೆ. ಇದು ರೈತರ ಅಕ್ರೋಶಕ್ಕೆ ಕಾರಣವಾಗಿದ್ದು, ಜಮೀನು ಸ್ವಾಧೀನ ಪ್ರಕ್ರಿಯೆ ಸ್ಥಗಿತವಾದ ಪರಿಣಾಮ ಯೋಜನೆ ಪೂರ್ಣವಾಗಲು ತಡವಾಗಿದೆ. ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ, ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಮತ್ತು ನಾನು ಸರ್ಕಾರದೊಂದಿಗೆ ಚರ್ಚಿಸಿ, ಹಣ ಬಿಡುಗಡೆಗೆ ಒತ್ತಾಯಿಸಿದ್ದೇವೆ. ಯೋಜನೆ 2024ರಲ್ಲಿ ಪೂರ್ಣಗೊಂಡು ಬಯಲುಸೀಮೆಯ ಕೆರೆಗಳಿಗೆ ನೀರು ಬರಲಿದೆ ಎಂದು ತಿಳಿಸಿದರು.