ದೊಡ್ಡಬಳ್ಳಾಪುರ: ಲಾಕ್ಡೌನ್ ಕಾರಣ ಮದುವೆ, ನಿಶ್ಚಿತಾರ್ಥ ಸೇರಿದಂತೆ ಶುಭ ಸಮಾರಂಭಗಳು ಸರಳವಾಗಿ ಮನೆಗಳಲ್ಲೇ ನಡೆಯುತ್ತಿದ್ದು, ಇದರಿಂದ ಕಲ್ಯಾಣ ಮಂಟಪಗಳ ಮಾಲೀಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 200ಕ್ಕೂ ಹೆಚ್ಚು ಸಣ್ಣ ಮತ್ತು ದೊಡ್ಡ ಕಲ್ಯಾಣ ಮಂಟಪಗಳಿವೆ. ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ ಬಹುತೇಕ ಜನರು ಬ್ಯಾಂಕ್ಗಳಿಂದ ಸಾಲ ಪಡೆದು ಅರಮನೆಯಂತಹ ಕಲ್ಯಾಣ ಮಂಟಪಗಳನ್ನು ಕಟ್ಟಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ಕರ್ಫ್ಯೂ, ಲಾಕ್ಡೌನ್ ಕಾರಣಕ್ಕೆ ಕಲ್ಯಾಣ ಮಂಟಪಗಳ ಬಾಗಿಲು ಬಂದ್ ಆಗಿವೆ. ಹೀಗಾಗಿ, ಬ್ಯಾಂಕ್ಗಳಿಂದ ಸಾಲ ಪಡೆದ ಮಾಲೀಕರು ಬಡ್ಡಿ ಕಟ್ಟಲಾಗದೆ ಸಮಸ್ಯೆಗೆ ಸಿಲುಕಿದ್ದಾರೆ. ಇದರೊಂದಿಗೆ ಕಲ್ಯಾಣ ಮಂಟಪದ ನಿರ್ವಹಣೆ, ಸಿಬ್ಬಂದಿ ಸಂಬಳ, ವಿದ್ಯುತ್ ಮತ್ತು ನೀರಿನ ಬಿಲ್ ಸೇರಿದಂತೆ ಕಲ್ಯಾಣ ಮಂಟಪಗಳ ಮಾಲೀಕರ ತಲೆ ಮೇಲೆ ತಿಂಗಳಿಗೆ 4ರಿಂದ 5 ಲಕ್ಷ ಆರ್ಥಿಕ ಹೊರೆಯಾಗುತ್ತಿದೆ.
ಕಲ್ಯಾಣ ಮಂಟಪಗಳೊಂದಿಗೆ ಫ್ಲವರ್ ಡೆಕೋರೇಟರ್, ಆಡುಗೆ ಮಾಡುವರು, ಆರ್ಚಕರು, ಸ್ವಚ್ಛತಾ ಸಿಬ್ಬಂದಿ, ಸೆಕ್ಯೂರಿಟಿ ಗಾರ್ಡ್ಗಳು ನೇರ ಸಂಬಂಧ ಹೊಂದಿದ್ದು, ಮುದವೆ ಕಾರ್ಯಕ್ರಮಗಳು ನಡೆಯದ ಕಾರಣ ಇವರೆಲ್ಲರೂ ಕೆಲಸ ಸಿಗದೆ ಸಮಸ್ಯೆಗೆ ಸಿಲುಕಿದ್ದಾರೆ.
ಕಲ್ಯಾಣ ಮಂಟಪಗಳ ಮಾಲೀಕರ ಪರವಾಗಿ ಸರ್ಕಾರಕ್ಕೆ ಮಾನವಿ ಮಾಡಿರುವ ನಗರದ ಕೆ.ಎಂ.ಹೆಚ್ ಕಲ್ಯಾಣ ಮಂಟಪದ ಮಾಲೀಕ ಕೆ.ಎಂ.ಹನುಮಂತರಾಯಪ್ಪ, ನಮಗೆ ಯಾವುದೇ ರೀತಿಯ ಸಹಾಯ ಬೇಡ. ಮದುವೆ ಸಮಾರಂಭಗಳಲ್ಲಿ 100 ಜನರು ಭಾಗವಹಿಸಲು ಅವಕಾಶ ನೀಡಬೇಕು. ಕೋವಿಡ್ ನಿಯಮ ಪಾಲನೆ ಮಾಡುವ ಮೂಲಕ ಕಲ್ಯಾಣ ಮಂಟಪಗಳಲ್ಲಿ ಮದುವೆಗಳನ್ನು ಮಾಡಲಾಗುವುದು ಎಂದಿದ್ದಾರೆ.