ದೊಡ್ಡಬಳ್ಳಾಪುರ: ಲಾಕ್ ಡೌನ್ ಹಿನ್ನೆಲೆ ನೇಕಾರಿಕೆ ಉದ್ಯಮ ಸಂಕಷ್ಟದಲ್ಲಿದೆ. ಹೀಗಾಗಿ ನೇಕಾರರು ಒಂದೊತ್ತಿನ ಊಟಕ್ಕೂ ಪರದಾಟುವ ದುಃಸ್ಥಿತಿ ಬಂದೊದಗಿದೆ. ಈ ಹಿನ್ನೆಲೆ ನೇಕಾರರ ಬೇಡಿಕೆಗಳನ್ನ ಈಡೇರಿಸುವಂತೆ ಒತ್ತಾಯಿಸಿ ನೇಕಾರರ ಕುಟುಂಬ ಸದಸ್ಯರು ಮನೆ ಮುಂದೆ ಪ್ಲೆಕಾರ್ಡ್ ಹಿಡಿದು ಮೌನ ಪ್ರತಿಭಟನೆ ನಡೆಸಿದರು.

ದೊಡ್ಡಬಳ್ಳಾಪುರದಲ್ಲಿ ನೇಕಾರಿಕೆ ಪ್ರಮುಖ ಉದ್ಯಮ. ನಗರದಲ್ಲಿ ನೇಕಾರಿಕೆ ನಂಬಿ 20 ರಿಂದ 25 ಸಾವಿರ ಕುಟುಂಬಗಳು ಜೀವನ ಸಾಗಿಸುತ್ತಿವೆ. ಕಳೆದ ಕೆಲವು ವರ್ಷಗಳಿಂದ ನೋಟ್ ಬ್ಯಾನ್, ಜಿಎಸ್ಟಿ ಜಾರಿಯಿಂದ ನೇಕಾರಿಕೆ ಉದ್ಯಮ ಸಂಪೂರ್ಣ ನಲುಗಿತ್ತು. ಇದೀಗ ಕೊರೊನಾ ವೈರಸ್ ಹಾವಳಿಯಿಂದ ಲಾಕ್ ಡೌನ್ ಜಾರಿಯಾದ ನಂತರ ಗಾಯದ ಮೇಲೆ ಬರೆ ಎಳೆದಂತಾಗಿದೆ.
ನೇಯ್ದ ಬಟ್ಟೆ ಬಿಕರಿಯಾಗದೆ ಸಾಲದ ಸುಳಿಗೆ ಸಿಲುಕಿರುವ ನೌಕರರು ಸಂಕಷ್ಟ ಅನುಭವಿಸುತ್ತಿದ್ದಾರೆ. ಲಾಕ್ ಡೌನ್ ಜಾರಿ ಹಿನ್ನೆಲೆ ಯಾವುದೇ ಸಭೆ, ಪ್ರತಿಭಟನೆ ನಡೆಸದಂತೆ ನಿಷೇಧಾಜ್ಞೆ ಜಾರಿ ಇದೆ. ತಾಲೂಕಿನ ನೇಕಾರರ ಹಿತರಕ್ಷಣಾ ಸಮಿತಿ ನೇಕಾರರ ಕಷ್ಟಗಳನ್ನ ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ, ಪ್ರತಿಪಕ್ಷದ ಮುಖಂಡರು, ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಬೇಸತ್ತು ಹೋಗಿದ್ದಾರೆ. ನೇಕಾರರು ಒಂದು ತಿಂಗಳಿಂದ ಕೆಲಸವಿಲ್ಲದೆ ಬರಿಗೈಯಲ್ಲಿದ್ದಾರೆ. ಆದರೆ, ಸರ್ಕಾರ ಮಾತ್ರ ಇವರ ಕಷ್ಟ ಕೇಳುತ್ತಿಲ್ಲವಂತೆ.
ವಾಟ್ಸ್ಯಾಪ್ ಮೂಲಕ ಜವಳಿ ಸಚಿವರಿಗೆ ಫೋಟೋ ರವಾನೆ:
ಖಾಲಿ ಭರವಸೆ ಸಾಕು..ವೇತನ ಬೇಕು. ನೇಯ್ಗೆ ಉದ್ಯಮ ಉಳಿಸಿ-ಆರ್ಥಿಕತೆ ರಕ್ಷಿಸಿ, ಆಹಾರ ಒದಗಿಸಿ ಬದುಕು ಉಳಿಸಿ ಇಂತಹ ಬರಹಗಳ ಪ್ಲೆಕಾರ್ಡ್ ಹಿಡಿದ ನೇಕಾರರ ಕುಟುಂಬದ ಸದಸ್ಯರು ತಮ್ಮ ಮನೆಯ ಮುಂದೆ ಮೌನ ಪ್ರತಿಭಟನೆ ನಡೆಸಿದರು. ಇಷ್ಟಕ್ಕೆ ಸುಮ್ಮನಾಗದ ನೇಕಾರರು ಫೋಟೋಗಳನ್ನು ಜಿಲ್ಲಾ ಮತ್ತು ರಾಜ್ಯ ಮಟ್ಟದ ಅಧಿಕಾರಿಗಳಿಗೆ ಮತ್ತು ಜವಳಿ ಸಚಿವ ಶ್ರೀಮಂತ ಪಾಟೀಲ್ ಅವರಿಗೂ ಕಳುಹಿಸಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದ್ದಾರೆ.