ದೊಡ್ಡಬಳ್ಳಾಪುರ/ಬೆಂಗಳೂರು: ತಾಲೂಕಿನ ಚಿಕ್ಕಹೆಜ್ಜಾಗಿ ಪುಟ್ಟ ಗ್ರಾಮದ ಜನರು ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ ತಮ್ಮ ಕೈಲಾದ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಮಳೆಯಿಂದಾಗಿ ಉತ್ತರ ಕರ್ನಾಟಕ ಹಾಗೂ ಕರಾವಳಿ ಭಾಗಗಳು ತತ್ತರಿಸಿ ಹೋಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಚಿಕ್ಕಹೆಜ್ಜಾಜಿ ಗ್ರಾಮದ ಜನರು ಸ್ವಯಂಪ್ರೇರಿತರಾಗಿ ತಮ್ಮ ಕೈಲಾದ ಸಹಾಯ ಮಾಡಲು ಮುಂದಾಗಿದ್ದು ಸುಮಾರು ಒಂದು ಲೋಡ್ ದವಸ-ಧಾನ್ಯ ಹಾಗೂ ದಿನಬಳಕೆ ವಸ್ತುಗಳನ್ನ ಸಂಗ್ರಹ ಮಾಡಿ ತಮ್ಮ ಸ್ವಂತ ಖರ್ಚಿನಲ್ಲೇ ಬೆಳಗಾವಿಗೆ ರವಾನೆ ಮಾಡಿದ್ದಾರೆ.
ಸಂತ್ರಸ್ತರಿಗಾಗಿ ಅಕ್ಕಿ, ಉಪ್ಪು, ಬೇಳೆ, ಎಣ್ಣೆ, ರಾಗಿ ಹಿಟ್ಟು, ಸೋಪು, ಬ್ರಶ್, ಪೇಸ್ಟ್, ಮೇಣದ ಬತ್ತಿ, ಬಿಸ್ಕತ್ ಸೇರಿದಂತೆ ಹಲವು ವಸ್ತುಗಳನ್ನ ಸಂಗ್ರಹ ಮಾಡಿ ಕಳುಹಿಸಿದ್ದಾರೆ.
ನವರತ್ನ ಅಗ್ರಹಾರದಿಂದ ಮೇವು, ಆಹಾರ ರವಾನೆ:
ಇನ್ನೊಂದೆಡೆ ಬೆಂಗಳೂರು ಉತ್ತರ ಬ್ಯಾಟರಾಯನಪುರ ಕ್ಷೇತ್ರದ ನವರತ್ನ ಅಗ್ರಹಾರ ಗ್ರಾಮದ ಜನರು ಕೂಡ ಪ್ರವಾಹ ಪೀಡಿತರ ನೆರವಿಗೆ ಧಾವಿಸಿದ್ದಾರೆ. ಗ್ರಾಮದ ಮುಖಂಡರು, ಯುವಕರು ಸೇರಿ ದೇಣಿಗೆ ಸಂಗ್ರಹಿಸಿ ಬಟ್ಟೆ, ಅಕ್ಕಿ, ಆಹಾರ ಸಾಮಾಗ್ರಿಗಳ ಜೊತೆ ದನಕರುಗಳಿಗೆ ಬೇಕಾದ ಮೇವು ಸೇರಿ ಸುಮಾರು 9 ಲಕ್ಷದ ಸರಕನ್ನು ಎರಡು ಟ್ರಕ್ಗಳಲ್ಲಿ ಬಾದಮಿ ಕ್ಷೇತ್ರದ ಸಂತ್ರಸ್ತರಿಗೆ ರವಾನೆ ಮಾಡಿದ್ದಾರೆ.
ಈ ಟ್ರಕ್ಗಳಲ್ಲಿ ಗ್ರಾಮದ ಇಪ್ಪತ್ತು ಜನರು ಸಹ ಹೋಗಿದ್ದು, ಸ್ವತಃ ಅವರೇ ಸಂತ್ರಸ್ತರಿಗೆ ಈ ವಸ್ತುಗಳನ್ನು ನೀಡುವುದಾಗಿ ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಮಹೇಶ್‌ಕುಮಾರ್ ತಿಳಿಸಿದ್ದಾರೆ.