ಬೆಂಗಳೂರು/ ಹೊಸಕೋಟೆ: ರಾಜ್ಯದಲ್ಲಿ ಕೊರೋನಾ ಭೀತಿ ಹೆಚ್ಚಾಗಿದ್ದು, ಗ್ರಾಮೀಣ ಭಾಗಗಳಲ್ಲಿ ಸಹ ಭಯದ ವಾತಾವರಣ ನಿರ್ಮಾಣವಾಗಿದೆ. ಈ ನಡುವೆ ಬೆಂಗಳೂರಿನಿಂದ ಹಳ್ಳಿಗಳತ್ತ ಜನ ಸಾಲು ಸಾಲಾಗಿ ಹೊರಟಿರೋ ಪರಿಣಾಮ ಗ್ರಾಮಸ್ಥರಲ್ಲಿ ಭಯ ಮೂಡಿಸಿದೆ. ಇದೇ ಕಾರಣಕ್ಕೆ ಯಾರೂ ಸಹ ಹಳ್ಳಿ ಪ್ರವೇಶ ಮಾಡದಂತೆ ಊರಿನವರೆಲ್ಲಾ ಸೇರಿ ನಿರ್ಬಂಧ ಹೇರಿದ್ದಾರೆ.
ಹಳ್ಳಿ ಜನರು ಊರಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಿಗೆ ಹತ್ತು ಅಡಿ ಎತ್ತರಕ್ಕೆ ಟ್ರ್ಯಾಕ್ಟರ್ ಮೂಲಕ ಮಣ್ಣು ಹೊಡೆದು ರೋಡ್ ಬ್ಲಾಕ್ ಮಾಡಿದ್ದಾರೆ. ಇದೇ ರೀತಿ ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲೂಕಿನ ವಾಗಟ ಹೊನಚನಹಳ್ಳಿ , ಮಾಕನಹಳ್ಳಿ, ಜಡಿಗೇನಹಳ್ಳಿ, ಗ್ರಾಮದ ಎಲ್ಲ ರಸ್ತೆಗಳನ್ನ ಗ್ರಾಮಸ್ಥರು ಬಂದ್ ಮಾಡಿದ್ದಾರೆ. ಈ ಮೂಲಕ ಯಾರೂ ಹೊರಗಿನವರು ಊರಿಗೆ ಪ್ರವೇಶಿಸದಂತೆ ಎಚ್ಚರಿಕೆ ವಹಿಸಿದ್ದು, ಗ್ರಾಮದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.