ಬೆಂ.ಗ್ರಾಮಾಂತರ: ರಾಜ್ಯ ವಿಧಾನಸಭೆ ಉಪಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಈಗಾಗಲೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿ ಅಖಾಡಕ್ಕೆ ಸಿದ್ಧಗೊಂಡಿದ್ದು, ನಾಮಪತ್ರ ಪರಿಶೀಲನೆ ನಡೆಯುತ್ತಿದೆ. ಹೊಸಕೋಟೆ ಕ್ಷೇತ್ರದಲ್ಲಿ ಉಪಚುನಾವಣೆ ಹಿನ್ನೆಲೆ, ಹೊಸಕೋಟೆಯ ತಾಲೂಕು ಕಛೇರಿಯಲ್ಲಿ ನಾಮಪತ್ರಗಳ ಪರಿಶೀಲನೆ ಮಾಡಲಾಯಿತು.
ಚುನಾವಣಾಧಿಕಾರಿ ಡಾ. ಹೆಚ್.ಎಲ್. ನಾಗರಾಜ್ ನಾಮಪತ್ರಗಳ ಪರಿಶೀಲನೆ ನಡೆಸಿದರು. ಒಟ್ಟು 27 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆಯಾಗಿದ್ದು, ಬಿಜೆಪಿಯಿಂದ ಎಂ.ಟಿ.ಬಿ ನಾಗರಾಜ್, ಕಾಂಗ್ರೆಸ್ನಿಂದ ಪದ್ಮಾವತಿ ಸುರೇಶ್ ಹಾಗೂ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಕಣದಲ್ಲಿದ್ದಾರೆ. ಇನ್ನು ಒಟ್ಟು 27 ನಾಮಪತ್ರಗಳಲ್ಲಿ 24 ನಾಮಪತ್ರಗಳು ಊರ್ಜಿತಗೊಂಡಿದ್ದು, 3 ನಾಮಪತ್ರಗಳು ತಿರಸ್ಕೃತಗೊಂಡಿವೆ. ಪಕ್ಷೇತರ ಅಭ್ಯರ್ಥಿಗಳಾದ ಚಂದ್ರೇಗೌಡ, ಎನ್. ವೆಂಕಟೇಶ್ ಹಾಗೂ ಇಂಡಿಯಾ ಪ್ರಜಾಬಂಧು ಪಕ್ಷದ ಎಂ. ರಾಮಮೂರ್ತಿ ಅವರ ನಾಮಪತ್ರಗಳು ತಿರಸ್ಕೃತಗೊಂಡಿವೆ.