ದೊಡ್ಡಬಳ್ಳಾಪುರ: ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಜಮೀನುಗಳಿಗೆ ಸಂಬಂಧಿಸಿದಂತೆ ನಕಲಿ ದಾಖಲೆ ಸೃಷ್ಟಿಸಿ 100 ಕೋಟಿ ಮೌಲ್ಯದ 138 ಎಕರೆ ಮಾರಾಟ ಮಾಡಿದ ಜಾಲವನ್ನು ಭೇದಿಸುವಲ್ಲಿ ದೊಡ್ಡಬಳ್ಳಾಪುರ ಉಪ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ 3 ಆರೋಪಿಗಳನ್ನ ಬಂಧಿಸಿದ್ದಾರೆ.
ಬೆಂಗಳೂರು ಮಹಾನಗರಕ್ಕೆ ಹೊಂದಿಕೊಂಡಿರುವ ದೊಡ್ಡಬಳ್ಳಾಪುರ ಮತ್ತು ದೇವನಹಳ್ಳಿ ತಾಲೂಕಿನ ಜಮೀನುಗಳಿಗೆ ಬಂಗಾರದ ಬೆಲೆ ಇದೆ. ತಮ್ಮ ಜಮೀನುಗಳ ಬಗ್ಗೆ ನಿರ್ಲಕ್ಷ್ಯ ವಹಿಸಿರುವ ಮಾಲೀಕರನ್ನ ಟಾರ್ಗೆಟ್ ಮಾಡುವ ಭೂಗಳ್ಳರು, ಅವರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಜಮೀನು ಮಾರಾಟ ಮಾಡಿ ನೂರಾರು ಕೋಟಿ ಹಣ ಸಂಪಾದಿಸಿದ್ದಾರೆ. ನಕಲಿ ಜಮೀನು ದಾಖಲೆ ಸೃಷ್ಟಿಸಿ ಜಮೀನು ಮಾರಾಟ ಮಾಡಿ ಅಕ್ರಮ ಲಾಭ ಪಡೆಯುತ್ತಿದ್ದ ಜಾಲವನ್ನು ದೊಡ್ಡಬಳ್ಳಾಪುರ ಉಪ ವಿಭಾಗದ ಪೊಲೀಸರು ಭೇದಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಸನ್ನ ಕುಮಾರ್, ಬಸವರಾಜ್ ಮತ್ತು ಉಮೇಶ್ನನ್ನು ಬಂಧಿಸಿ ವಿಚಾರಣೆ ಮುಂದುವರೆಸಿದ್ದಾರೆ.
ಬೆಂಗಳೂರು ಉತ್ತರ ತಾಲೂಕು ಚಿಕ್ಕಜಾಲದ ಕಾಡಿಗಾನಹಳ್ಳಿ ಗ್ರಾಮದ ಸರ್ವೇ ನಂಬರ್ 11/1 ರ ಜಮೀನಿನ ತಗಾದೆ ಕೋರ್ಟ್ನಲ್ಲಿ ನಡೆಯುತ್ತಿತ್ತು. ಈ ವೇಳೆ ಜಮೀನಿನ ಮೂಲ ಮಾಲೀಕರಿಗೆ ಗೊತ್ತಿಲ್ಲದಂತೆ ನಕಲಿ ದಾಖಲೆ ಸೃಷ್ಟಿಸಿ ಜಮೀನು ಹೊಡೆಯುವ ಸಂಚನ್ನು ಈ ಆರೋಪಿಗಳು ನಡೆಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿತ್ತು, ದೊಡ್ಡಬಳ್ಳಾಪುರ ಮತ್ತು ದೇವನಹಳ್ಳಿ ತಾಲೂಕಿನ ನಕಲಿ ದಾಖಲೆ ಸೃಷ್ಟಿಸಿದ ಪ್ರಸನ್ನ ಕುಮಾರ್ 138 ಎಕರೆ ಜಮೀನು ಮಾರಾಟ ಮಾಡಿ ಅಕ್ರಮವಾಗಿ 100 ಕೋಟಿಗೂ ಹೆಚ್ಚು ಲಾಭ ಮಾಡಿರುವುದು ಬೆಳಕಿಗೆ ಬಂದಿದೆ.
ನಕಲಿ ದಾಖಲೆ ಸೃಷ್ಟಿಸಿ ಜಮೀನು ಮಾರಾಟಕ್ಕೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರ ಸಬ್ ರಿಜಿಸ್ಟ್ರಾರ್ದೇವರಾಜ್ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ದಿನಾಂಕ 10/06/2020 ಪ್ರಕರಣ ದಾಖಲಿಸಿದ್ದಾರೆ. ಪ್ರಕರಣದ ಬೆನ್ನತ್ತಿದ ದೊಡ್ಡಬಳ್ಳಾಪುರ ಪೊಲೀಸರು ಜಮೀನು ಮಾರಾಟದ ಬೃಹತ್ ಜಾಲ ಭೇದಿಸಿದ್ದಾರೆ.
ಆರೋಪಿ ಪ್ರಸನ್ನ ಕುಮಾರ್ , ಬಸವರಾಜು ಮತ್ತು ಉಮೇಶ್ ಅರಳುಮಲ್ಲಿಗೆ , ದೊಡ್ಡ ಬಿದರಕಲ್ಲು, ಕಾಡಿಗಾನಹಳ್ಳಿ ಸೇರಿದಂತೆ ಹಲವು ಗ್ರಾಮಗಳ ಜಮೀನುಗಳಿಗೆ ಸಂಬಂಧಿಸಿದಂತೆ ನಕಲಿ ಕ್ರಯಪತ್ರ, ನಕಲಿ ದಾನ ಪತ್ರ, ನಕಲಿ ವಿಭಾಗ ಪತ್ರ, ನಕಲಿ ಹಕ್ಕು ನಿವೃತ್ತಿ ಪತ್ರ ಸೃಷ್ಟಿಸಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಅಸಲಿ ದಾಖಲೆ ಪತ್ರಗಳನ್ನ ತೆಗೆದು ಅದೇ ಜಾಗದಲ್ಲಿ ನಕಲಿ ದಾಖಲೆ ಪತ್ರಗಳನ್ನ ಇಡಲಾಗುತ್ತಿತ್ತು. ಈ ದಾಖಲೆಗಳನ್ನ ಆರ್ಟಿಐ ಮೂಲಕ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಪಡೆದು ಕೊಳ್ಳುತ್ತಿದ್ದರು. ಅನಂತರ ಮೂಲ ದಾಖಲಾತಿಗಳು ಕಳೆದು ಹೋಗಿವೆ ಎಂದು ದೂರು ನೀಡಿ ಎಸಿ ಕಚೇರಿಯಿಂದ ಪಡೆದ ಕ್ರಯ ಪತ್ರಗಳಿಗೆ ಖಾತೆ ಮಾಡಿಸಿಕೊಂಡು ಜಮೀನು ಮಾರಾಟ ಮಾಡಿ ಕೋಟಿ ಕೋಟಿ ಹಣ ಸಂಪಾದಿಸುತ್ತಿದ್ದರು.
ಹಲವು ವರ್ಷಗಳಿಂದ ಜಮೀನುಗಳ ಖಾಲಿ ಬಿಟ್ಟ ಮಾಲೀಕರೇ ಟಾರ್ಗೆಟ್
ಆರೋಪಿ ಪ್ರಸನ್ನ ಕುಮಾರ್ ತಂದೆ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಇದರಿಂದ ಪ್ರಸನ್ನ ಕುಮಾರ್ಗೆ ಜಮೀನು ಮಾರಾಟ ಕ್ರಯ ಮಾಡುವ ಬಗ್ಗೆ ಸಾಕಷ್ಟು ತಿಳುವಳಿಕೆ ಇತ್ತು. ಈತನ ಜೊತೆ ಸೇರಿದ ಬಸವರಾಜು ಮತ್ತು ಉಮೇಶ್ ಜೊತೆಯಾಗಿ ನಕಲಿ ದಾಖಲೆ ಸೃಷ್ಟಿಸಿ ಜಮೀನು ಮಾರಾಟಕ್ಕೆ ಇಳಿಯುತ್ತಿದ್ದರು. ಆರೋಪಿಗಳು ವ್ಯವಸ್ಥಿತವಾಗಿ ಪೂರ್ವ ತಯಾರಿಸಿ ಕಾರ್ಯಾಚರಣೆ ಇಳಿಯುತ್ತಿದ್ದರು ಎಂದು ತಿಳಿದುಬಂದಿದೆ.
ಇದಕ್ಕೂ ಮುನ್ನ ದೊಡ್ಡಬಳ್ಳಾಪುರ ಮತ್ತು ದೇವನಹಳ್ಳಿ ತಾಲೂಕು ಸುತ್ತಾಡುತ್ತಿದ್ದ ಆರೋಪಿಗಳು ಹಲವು ವರ್ಷಗಳಿಂದ ಜಮೀನುಗಳನ್ನ ಪಾಳು ಬಿಟ್ಟು, ಆ ಕಡೆ ಹೋಗದೇ ನಿರ್ಲಕ್ಷ್ಯ ತೋರಿಸುತ್ತಿದ್ದ ಮಾಲೀಕರನ್ನ ಹುಡುಕುತ್ತಿದ್ದರು. ಅಂತಹ ಜಮೀನುಗಳಿಗೆ ತಮ್ಮ ಸಂಬಂಧಿಕರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಬೇರೆಯವರಿಗೆ ಜಮೀನು ಮಾರಾಟ ಮಾಡುತ್ತಿದ್ದರು. ಒಂದು ವೇಳೆ ಮೂಲ ಮಾಲೀಕರು ಬಂದು ಪ್ರಶ್ನಿಸಿದರೆ, ಅವರ ವಿರುದ್ಧ ಸಿವಿಲ್ ನ್ಯಾಯಾಲಯಗಳಲ್ಲಿ ದಾವೆ ಹೂಡಿ ಮಧ್ಯವರ್ತಿಗಳ ಮೂಲಕ ಜಮೀನು ಮಾರಾಟ ಮಾಡಿಸುತ್ತಿದ್ದರು. ಇದೇ ರೀತಿ 10 ಕ್ಕೂ ಹೆಚ್ಚು ದಾವೆಗಳನ್ನ ವಿವಿಧ ನ್ಯಾಯಾಲಯಗಳಲ್ಲಿ ಹೂಡಿದ್ದರು ಎಂದು ತಿಳಿದು ಬಂದಿದೆ.