ನೆಲಮಂಗಲ(ಬೆಂಗಳೂರು): ನಗರದಲ್ಲಿ ಚಿಕಿತ್ಸೆಗಾಗಿ ಖಾಸಗಿ ಕ್ಲಿನಿಕ್ಗೆ ಬಂದಿದ್ದ ಅವಿವಾಹಿತ ಯುವತಿಗೆ ಅವಧಿಗೂ ಮುನ್ನ ಶಿಶು ಜನಿಸಿದೆ. ಪರಿಣಾಮ ಆಸ್ಪತ್ರೆಯ ಶೌಚಾಲಯ ಕಿಟಕಿಯಿಂದ ಶಿಶುವನ್ನ ಎಸೆದು ಪರಾರಿಯಾಗಿದ್ದಳು. ಬೆಂಗಳೂರು ಉತ್ತರ ತಾಲೂಕಿನ ಹೆಸರಘಟ್ಟದಲ್ಲಿ ಘಟನೆ ನಡೆದಿದೆ.
ಅವಿವಾಹಿತ ಯುವತಿ ಚಿಕಿತ್ಸೆಗಾಗಿ ಖಾಸಗಿ ಕ್ಲಿನಿಕ್ಗೆ ಬಂದಾಗ ಅವಧಿಗೂ ಮುನ್ನ ಶಿಶುವಿಗೆ ಜನ್ಮ ನೀಡಿದ್ದಾಳೆ. ನಂತರ ಸಮಾಜಕ್ಕೆ ಹೆದರಿದ ಆಕೆ ನವಜಾತ ಶಿಶುವನ್ನ ಶೌಚಾಲಯದ ಕಿಟಕಿಯಿಂದ ಎಸೆದು ಸ್ಥಳದಿಂದ ಪರಾರಿಯಾಗಿದ್ದಳು.
ಘಟನೆಗೆ ಸಂಬಂಧಿಸಿದಂತೆ ಕ್ಲಿನಿಕ್ ಆಡಳಿತ ಮಂಡಳಿಯಿಂದ ಸೊಲದೇವನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಸ್ಥಳೀಯರ ಪ್ರಕಾರ, 22 ವರ್ಷದ ಯುವತಿ ಎಂದು ತಿಳಿದು ಬಂದಿದೆ. ಆಕೆಯನ್ನ ವಶಕ್ಕೆ ಪಡೆದ ಪೊಲೀಸರು ಚಿಕಿತ್ಸೆಗಾಗಿ ಬೆಂಗಳೂರಿನ ವಾಣಿ ವಿಲಾಸ್ ಆಸ್ಪತ್ರೆಗೆ ಕಳುಹಿಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ನವಜಾತ ಶಿಶುವಿನ ಮೃತದೇಹವನ್ನು ಸಪ್ತಗಿರಿ ಆಸ್ಪತ್ರೆಗೆ ಕಳುಹಿಸಲಾಗಿದೆ.
ಯುವತಿಯ ಹೇಳಿಕೆ ಆಧಾರದ ಮೇಲೆ ಶಿಶುವಿನ ಜನನಕ್ಕೆ ಕಾರಣನಾದ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಈತ ಯುವತಿಯ ಪ್ರೇಮಿಯಾಗಿದ್ದು, ಗುಡೇಮಾರನಹಳ್ಳಿಯ ಶಶಾಂಕ್ (25) ಎಂದು ತಿಳಿದು ಬಂದಿದೆ. ಸೊಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಓದಿ: ಪೊಲೀಸರ ಭರ್ಜರಿ ಬೇಟೆ: ಬೆಂಗಳೂರಿನಲ್ಲಿ ₹ 4.50 ಕೋಟಿ ಮೌಲ್ಯದ ರಕ್ತಚಂದನ ಜಪ್ತಿ