ಬೆಂಗಳೂರು : ಚೆಕ್ ಪೋಸ್ಟ್‌ಗಳಲ್ಲಿ ಕರ್ತವ್ಯಕ್ಕೆ ಹಾಜರಾಗದ ಇಬ್ಬರು ಸಿಬ್ಬಂದಿಯನ್ನು ಸೇವೆಯಿಂದ ಅಮಾನತು ಮಾಡಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕರೀಗೌಡ ಆದೇಶ ಹೊರಡಿಸಿದ್ದಾರೆ.
ಲೋಕಸಭಾ ಚುನಾವಣೆ ಹಿನ್ನೆಲೆ ಚೆಕ್ ಪೋಸ್ಟ್‌ಗಳಲ್ಲಿ ವಾಹನಗಳ ತಪಾಸಣೆ ಮಾಡುವ ಕಾರಣಕ್ಕೆ ಮೂರು ಪಾಳಿಯಲ್ಲಿ ಅಧಿಕಾರಿಗಳ ನಿಯೋಜನೆ ಮಾಡಲಾಗಿತ್ತು. ಚೆಕ್ ಪೋಸ್ಟ್‌ಗಳಲ್ಲಿ ತಪಾಸಣೆಗೆ ನಿಯೋಜನೆಯಾಗಿದ್ದ ಅಧಿಕಾರಿಗಳು ಕೆಲಸಕ್ಕೆ ಗೈರು ಹಾಜರಿದ್ದರು. ಹೀಗಾಗಿ ಚುನಾವಣೆ ಕೆಲಸದಲ್ಲಿ ಬೇಜವಾಬ್ದಾರಿ ತೋರಿದ ಇಬ್ಬರು ಸಿಬ್ಬಂದಿಯನ್ನು ಸರ್ಕಾರಿ ಸೇವೆಯಿಂದ ಅಮಾನತುಗೊಳಿಸುವಂತೆ ಆದೇಶ ಹೊರಡಿಸಿದ್ದಾರೆ.
ವಿಜಯಪುರ- ಶಿಡ್ಲಘಟ್ಟ ರಸ್ತೆಯ ಕರ್ತವ್ಯಕ್ಕೆ ಗೈರಾಗಿದ್ದ ದೇವನಹಳ್ಳಿ ಸಮಾಜ ಕಲ್ಯಾಣ ಇಲಾಖೆಯ ಪ್ರಥಮ ದರ್ಜೆ ಸಹಾಯಕ ತಿಪ್ಪೇಸ್ವಾಮಿ ಮತ್ತು ದೊಡ್ಡಬಳ್ಳಾಪುರ-ಗೌರಿಬಿದನೂರು ರಸ್ತೆಯ ಗುಂಜೂರು ಚೆಕ್ಪೋಸ್ಟ್ನಲ್ಲಿ ಗೈರಾಗಿದ್ದ ಗಂಗಬೈರಪ್ಪ ಸಿಬ್ಬಂದಿ ಅಮಾನತುಗೊಂಡ ಸಿಬ್ಬಂದಿಗಳು. ಮುಂದಿನ ಆದೇಶದವರೆಗೂ ಇವರನ್ನು ಪ್ರಜಾ ಪ್ರತಿನಿಧಿ ಕಾಯ್ದೆಯಡಿ ಸರ್ಕಾರಿ ಸೇವೆಯಿಂದ ಅಮಾನತುಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.