ಹೊಸಕೋಟೆ: ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದು ಅಕ್ಕ, ತಮ್ಮ ಸ್ಥಳದಲ್ಲೇ ಸಾವಿಗೀಡಾದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಅಟ್ಟೂರು ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ. ಕೆ.ಆರ್.ಪುರ ನಿವಾಸಿಗಳಾದ ಶಾಜಿಯಾ ಭಾನು(26) ಹಾಗೂ ಇಬ್ರಾಹಿಂ ಸಾಬ್(16) ಮೃತಪಟ್ಟವರು.
ಕೋಲಾರ ಕಡೆಯಿಂದ ಬೆಂಗಳೂರಿಗೆ ಬರುವಾಗ ಇಲ್ಲಿನ ಡಾಬಾ ಸಮೀಪ ಲಾರಿ ಚಾಲಕ ಏಕಾಏಕಿ ಬ್ರೇಕ್ ಒತ್ತಿದ್ದರಿಂದ ಹಿಂಬದಿಯಲ್ಲಿ ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ಇತರ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಎಂವಿಜೆ ಮೆಡಿಕಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮುರುಗಮಲ್ಲಾ ದರ್ಗಾ ದರ್ಶನಕ್ಕೆ ತೆರಳಿದ ಬಳಿಕ ಚಿಂತಾಮಣಿಯಿಂದ ಬೈಲನರಸಪುರದ ಮೂಲಕ ಕೋಲಾರ ಹೆದ್ದಾರಿಯಲ್ಲಿ ಬರುವಾಗ ಅಪಘಾತ ಸಂಭವಿಸಿದೆ. ಕಾರಿನಲ್ಲಿ ಒಂದೇ ಕುಟುಂಬದ 9 ಜನರು ಪ್ರಯಾಣಿಸುತ್ತಿದ್ದರು. ಅಪಘಾತದ ಸ್ಥಳಕ್ಕೆ ಹೊಸಕೋಟೆ ಡಿವೈಎಸ್ಪಿ ಉಮಾಶಂಕರ್ ಮತ್ತು ಇನ್ಸ್ಪೆಕ್ಟರ್ ಮಂಜುನಾಥ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಭೀಕರ ರಸ್ತೆ ಅಪಘಾತ: ಒಂದೇ ಕುಟುಂಬದ ನಾಲ್ವರು ದುರ್ಮರಣ