ದೊಡ್ಡಬಳ್ಳಾಪುರ: ಇಲ್ಲಿನ ಕನಸವಾಡಿ ಶನಿ ಮಹಾತ್ಮ ದೇವಾಲಯಕ್ಕೆ ಮಾಂಸದ ತುಂಡುಗಳನ್ನು ಒಳಗೊಂಡ ಹೂವಿನ ಹಾರ ತಂದಿದ್ದ ಆರೋಪಿಗಳನ್ನು ಶನಿವಾರ ದೇವಾಲಯದ ಸಿಬ್ಬಂದಿ ಪತ್ತೆ ಹಚ್ಚಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಆ ಬಳಿಕ ಕಿಡಿಗೇಡಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹೊಸಕೋಟೆ ತಾಲೂಕಿನ ಕಂಬಲಹಳ್ಳಿ ರಾಜು ಹಾಗೂ ವೈಟ್ ಫೀಲ್ಡ್ ಮೂಲದ ಆಟೋ ಚಾಲಕ ಸೋಮಶೇಖರ್ ಬಂಧಿತರು.
ಏನಿದು ಪ್ರಕರಣ?: ಆರೋಪಿಗಳು ಒಂದು ತಿಂಗಳ ಹಿಂದೆ ಮಧ್ಯಾಹ್ನದ ಸಮಯದಲ್ಲಿ ದೇವಾಲಯಕ್ಕೆ ಬಂದಿದ್ದರು. ಈ ವೇಳೆ ಹೂವಿನ ಹಾರಗಳೊಂದಿಗೆ ಮಾಂಸದ ತುಂಡುಗಳನ್ನು ಪೋಣಿಸಿ ಸಿದ್ಧಪಡಿಸಲಾಗಿದ್ದ ಹಾರ ತಂದಿದ್ದರು. ಮಧ್ಯಾಹ್ನದ ಸಮಯವಾಗಿದ್ದರಿಂದ ದೇವಾಲಯದ ಸಿಬ್ಬಂದಿ, ಹೂವಿನ ಹಾರದ ಪ್ಲಾಸ್ಟಿಕ್ ಕವರ್ ಅನ್ನು ಬಾಗಿಲಿನಲ್ಲೇ ಪಡೆದು ಸಂಜೆಯ ಅಲಂಕಾರಕ್ಕೆ ಬಳಸಲಾಗುವುದು ಎಂದು ಹೇಳಿ ಕಳುಹಿಸಿದ್ದರು. ಸಂಜೆ ಹಾರಗಳನ್ನು ತೆಗೆದು ನೀರು ಹಾಕುವಾಗ ಮಾಂಸದ ತುಂಡುಗಳನ್ನು ಪೋಣಿಸಿದ್ದು ಬೆಳಕಿಗೆ ಬಂದಿತ್ತು.
ಇದನ್ನೂ ಓದಿ : ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ತೆರಳಿದ ಆರೋಪ ವಿಚಾರ: ಕಾಂಗ್ರೆಸ್ ಕಿಡಿ, ಮಂಡ್ಯದಲ್ಲಿ ಸಿಟಿ ರವಿ ಸ್ಪಷ್ಟನೆ
ಸಿಸಿಟಿವಿಯಲ್ಲಿ ದೃಶ್ಯ ಸೆರೆ: ಆರೋಪಿಗಳು ದೇವಾಲಯಕ್ಕೆ ಬಂದು ಹೋಗಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿತ್ತು. ಈ ದೃಶ್ಯಗಳನ್ನು ಆಧರಿಸಿ ದೊಡ್ಡ ಬೆಳವಂಗಲ ಪೊಲೀಸರು ಸಾಕಷ್ಟು ಹುಡುಕಾಟ ನಡೆಸಿದ್ದರೂ ಆರೋಪಿಗಳು ಪತ್ತೆಯಾಗಿರಲಿಲ್ಲ. ಶನಿವಾರ ಮತ್ತೆ ಎರಡನೇ ಬಾರಿ ಇದೇ ಆರೋಪಿಗಳು ದೇವಾಲಯಕ್ಕೆ ಹಾರ ಕೊಡಲು ಬಂದಾಗ ಸಿಸಿಟಿವಿ ದೃಶ್ಯಗಳ ಮೇಲೆ ತೀವ್ರ ನಿಗಾ ವಹಿಸಿದ್ದ ದೇವಾಲಯದ ಸಿಬ್ಬಂದಿ, ಆರೋಪಿಗಳನ್ನು ಗುರುತಿಸಿ ಹಾರ ಕೊಡುವ ಸಂದರ್ಭದಲ್ಲೇ ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ದೇವಾಲಯ ಅಶುದ್ಧಿ ಯತ್ನ: ದೊಡ್ಡಬಳ್ಳಾಪುರ ತಾಲೂಕಿನ ಇತಿಹಾಸಪ್ರಸಿದ್ಧ ಚಿಕ್ಕ ಮಧುರೆ ದೇವಾಲಯವನ್ನು ಅಶುದ್ಧಿಗೊಳಿಸಲು ಕಿಡಿಗೇಡಿಗಳು ಪ್ರಯತ್ನಿಸಿದ್ದಾರೆ. ಎರಡನೇ ಬಾರಿ ಸಹ ಮಾಂಸದ ಹಾರವನ್ನು ಇಟ್ಟು ಪರಾರಿ ಆಗಲು ಯತ್ನಿಸಿದಾಗ ದೇವಾಲಯದ ಸಿಬ್ಬಂದಿ ಕೈಗೆ ಸಂಸ್ಕಾರಹೀನರು ಸಿಕ್ಕಿಬಿದ್ದಿದ್ದಾರೆ.
ಇದನ್ನೂ ಓದಿ: ಮಾಂಸ ತಿಂದು ದೇವಾಲಯಕ್ಕೆ ಹೋಗಿಲ್ಲ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಸ್ಪಷ್ಟನೆ
ಧಾರ್ಮಿಕ ಸ್ಥಳ ಅಪವಿತ್ರಗೊಳಿಸಲು ಯತ್ನಿಸಿದ ಆರೋಪದ ಮೇಲೆ ದೊಡ್ಡ ಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈಗಾಗಲೇ ಕಿಡಿಗೇಡಿಗಳನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.