ದೊಡ್ಡಬಳ್ಳಾಪುರ: ಡಿಸೆಂಬರ್ 15ರಿಂದ ರೈತರಿಂದ ರಾಗಿ ಖರೀದಿ ನೋಂದಣೆ ಕಾರ್ಯ ಆರಂಭವಾಗಬೇಕಿತ್ತು. ಆದರೆ ನೋಡಲ್ ಅಧಿಕಾರಿಯ ಧಿಡೀರ್ ವರ್ಗಾವಣೆಯಿಂದ ನೋಂದಣಿ ಕಾರ್ಯ ಮುಂದೂಡಲಾಗಿದೆ. ಇದರಿಂದ ರೊಚ್ಚಿಗೆದ್ದ ರೈತರು ಹೆದ್ದಾರಿಗಿಳಿದು ರಸ್ತೆ ತಡೆದು ಪ್ರತಿಭಟನೆಗೆ ಮುಂದಾದರು. ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.
2022-23ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯ ರೈತರಿಂದ ರಾಗಿ ಖರೀದಿ ಕಾರ್ಯ ಆರಂಭವಾಗಬೇಕಿತ್ತು. ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ ವತಿಯಿಂದ ಖರೀದಿ ಕಾರ್ಯ ನಡೆಯುತ್ತದೆ. ಇಂದಿನಿಂದ ರೈತರಿಂದ ರಾಗಿ ಖರೀದಿ ನೋಂದಣಿ ಕಾರ್ಯ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದರು. ನೋಂದಣಿ ಮಾಡಿಸಲು ಗುರುವಾರ ಮುಂಜಾನೆಯೇ ನಗರದ ರೈತ ಭವನದ ಬಳಿ ರೈತರು ಆಗಮಿಸಿದ್ದರು.
ತಾಲೂಕಿನ ಹಲವು ಗ್ರಾಮಗಳಿಂದ ಬಂದಿದ್ದ ರೈತರು ತಕ್ಚಣವೇ ನೋಂದಣಿ ಪ್ರಕ್ರಿಯೆ ಆರಂಭಿಸುವಂತೆ ಆಗ್ರಹಿಸಿದರು. 200ಕ್ಕೂ ಹೆಚ್ಚು ರೈತರು ರಸ್ತೆಯಲ್ಲಿ ನಿಂತು ಪ್ರತಿಭಟನೆ ಮಾಡಿದರು. ಇದರಿಂದ ಒಂದು ಕಿ.ಮೀ ವರೆಗೆ ವಾಹನ ದಟ್ಟಣೆ ಉಂಟಾಗಿತ್ತು. ಸ್ಥಳಜಕ್ಕಾಗಮಿಸಿದ ಅಧಿಕಾರಿಗಳು ನಾಳೆಯಿಂದ ನೋಂದಣಿ ಪ್ರಾರಂಭಿಸುವ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಶಾಲೆಗೆ ಮೀಸಲಿಟ್ಟ ಸ್ಥಳದಲ್ಲಿ ಸಮುದಾಯ ಭವನ ನಿರ್ಮಾಣ.. ಪುರಸಭೆ ಮುಂದೆ ವಿದ್ಯಾರ್ಥಿಗಳ ಪ್ರತಿಭಟನೆ