ನೆಲಮಂಗಲ: ಇಡೀ ಕುಟುಂಬವನ್ನು ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಆದರೆ ಇವರು ಸಾಕಿದ್ದ ಜಾನುವಾರುಗಳಿಗೆ ನೀರು, ಮೇವು ಇಲ್ಲದೆ ಬಡಕಲಾಗಿವೆ. ಈ ಹಸುಗಳನ್ನು ಕಂಡರೆ ಹೃದಯ ಹಿಂಡಿದಂತಾಗುತ್ತದೆ.
ತಾಲೂಕಿನ ವೀರಸಾಗರ ಗ್ರಾಮದ 55 ವರ್ಷದ ಮಹಿಳೆಯೊಬ್ಬರು ಕೊರೊನಾಗೆ ಬಲಿಯಾದ ಹಿನ್ನೆಲೆ ಆಕೆಯ ಸಂಪರ್ಕದಲ್ಲಿದ್ದ ಸಂಬಂಧಿಗಳನ್ನು ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಇದರಿಂದ ಕ್ವಾರಂಟೈನ್ಗೊಳಗಾದ ಮನೆಯವರ ಜಾನುವಾರುಗಳನ್ನು ನೋಡಿಕೊಳ್ಳುವವರೇ ಇಲ್ಲದಂತಾಗಿದೆ. ಪ್ರತಿ ದಿನ ಸುಮಾರು 60 ಲೀಟರ್ ಹಾಲು ನೀಡುತ್ತಿದ್ದ ಗೋವುಗಳಿಗೆ ಮೇವು ಇಲ್ಲ. ಹಾಲು ಕರೆಯುವವರು ಇಲ್ಲವಾಗಿದೆ.
ಹಸುಗಳ ಹತ್ತಿರ ಹೋದರೆ ನಮಗೂ ಕೊರೊನಾ ಬರುತ್ತದೋ ಎಂಬ ಭೀತಿಯಲ್ಲಿ ಅಕ್ಕಪಕ್ಕದವರು ಯಾರೂ ಸಹ ಜಾನುವಾರುಗಳ ಹತ್ತಿರ ಹೋಗುತ್ತಿಲ್ಲ. ಹೀಗಾಗಿ ಗ್ರಾಮಸ್ಥ ಭಾನುಪ್ರಕಾಶ್ ಆಸ್ಪತ್ರೆ ಕ್ವಾರಂಟೈನ್ ಬದಲಿಗೆ ಹೋಮ್ ಕ್ವಾರಂಟೈನ್ ಮಾಡಿದರೆ ಹಸುಗಳನ್ನ ನೋಡಿಕೊಳ್ಳುವರೆಂದು ನೆಲಮಂಗಲ ತಾಲೂಕು ಆಡಳಿತಕ್ಕೆ ಮನವಿ ಮಾಡಿದ್ದಾರೆ.